

ಹಾಸನ: ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು 35 ವಾರ್ಡ್‌ಗಳಿಗೆ ಸಮಾನ ಅನುದಾನ ಹಂಚಿಕೆ ಮಾಡುವುದಾಗಿ ಮಹಾಪೌರ ಗಿರೀಶ್ ಚನ್ನವೀರಪ್ಪ ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಕುವೆಂಪು ಸಭಾಂಗಣದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಆಡಳಿತದ ಕುರಿತು ಚರ್ಚೆ ಮಾಡುವ ಉದ್ದೇಶವಿಲ್ಲ. ನನ್ನ ಅವಧಿಯಲ್ಲಿ ಯಾವ ಸದಸ್ಯರಿಗೂ ಅನುದಾನದಲ್ಲಿ ಕಡಿತವಾಗುವುದಿಲ್ಲ. ನಗರದೊಳಗಿನ ವಾರ್ಡ್‌ಗಳ ಜತೆಗೆ ಹೊರವಲಯಕ್ಕೆ ಸೇರ್ಪಡೆಯಾದ ಹಳ್ಳಿಗಳಿಗೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಘೋಷಿಸಿದರು.
ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದರೆ ಮೌಖಿಕ ದೂರು ನೀಡುವುದನ್ನು ಬಿಟ್ಟು ಲಿಖಿತ ದೂರು ಸಲ್ಲಿಸಲು ಸದಸ್ಯರಿಗೆ ಅವರು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆದರೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಯೋಗೇಂದ್ರ ಬಾಬು, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯವರು ಕೋಟ್ಯಂತರ ರೂ. ಮೌಲ್ಯದ ಸರ್ವೇ ನಂ.397ರ 1.37 ಗುಂಟೆ ಜಾಗವನ್ನು ಅಕ್ರಮವಾಗಿ ಕಬಳಿಸಿದ್ದಾರೆ. ಹಲವಾರು ಸಭೆಗಳಲ್ಲಿ ವಿಷಯ ಎತ್ತಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಮೊದಲು ಈ ವಿಷಯ ಇತ್ಯರ್ಥಪಡಿಸಿ ಮುಂದಿನ ನಡವಳಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾಪೌರರು, ಸಂಬಂಧಪಟ್ಟ ಸಂಸ್ಥೆಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಸರ್ವೇ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಸ್ಥಳೀಯರ ಸಹಿ ಸಿಗದ ಕಾರಣ ಇಂಡೀಕರಣ ಪೂರ್ಣಗೊಂಡಿಲ್ಲ. ಮುಂದಿನ ಸಭೆಯಲ್ಲಿ ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಮಂಜುನಾಥ್ ಮಾತನಾಡಿ, ಮಲೆನಾಡು ಕಾಲೇಜಿನ ಆಡಳಿತ ಮಂಡಳಿ ಈವರೆಗೆ ಎಷ್ಟು ತೆರಿಗೆ ಪಾವತಿಸಿದೆ ಮತ್ತು ಎಷ್ಟು ಕಟ್ಟಡಗಳಿಗೆ ಅನುಮತಿ ಪಡೆದಿದೆ ಎಂಬುದರ ವಿವರ ಬೇಕು. ನಮ್ಮ ಸದಸ್ಯರಲ್ಲಿ ಒಬ್ಬರ ಕಟ್ಟಡಕ್ಕೆ ಬೀಗ ಹಾಕಿರುವುದು ಎಲ್ಲರಿಗೂ ಅವಮಾನ. ಬಾಕಿ ತೆರಿಗೆ ಶೀಘ್ರ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಪೌರಾಯುಕ್ತ ಕೃಷ್ಣಮೂರ್ತಿ, ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಹಾಜರಿದ್ದರು.
ನಾಮಫಲಕ ಗುತ್ತಿಗೆ ಅಕ್ರಮ ಆರೋಪ
ಸಭೆಯಲ್ಲಿ ಹಲವರು, ಪಾಲಿಕೆ ನಾಮಫಲಕ ಅಳವಡಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಕೇವಲ ಒಂದು ವರ್ಷದ ಗುತ್ತಿಗೆ ಟೆಂಡರ್ ಕರೆದರೂ 15 ವರ್ಷಗಳಂತೆ ದಾಖಲೆ ಮಾಡಿಕೊಂಡಿದ್ದಾರೆ. ಸಂಬಂಧಿಸಿದ ಕಡತಗಳು ನಾಪತ್ತೆಯಾಗಿವೆ. ಹಿಂದಿನ ಆಯುಕ್ತ ಸತೀಶ್ ಅವರೇ ಇದರ ಹೊಣೆಗಾರರು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ತ್ವರಿತ ತನಿಖೆ ನಡೆಸಿ, ಗುತ್ತಿಗೆದಾರರಿಂದ ಕಡತಗಳನ್ನು ವಶಪಡಿಸಿಕೊಂಡು ನೈಜತೆ ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಕೃಷ್ಣಮೂರ್ತಿ ತೀಳಿಸಿದರು.
ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ನನ್ನ ಅವಧಿಯಲ್ಲಿ ಕೇವಲ ಒಂದು ವರ್ಷಕ್ಕಷ್ಟೇ ಗುತ್ತಿಗೆ ನೀಡಿದ್ದೆವು. ನಂತರದ ದಾಖಲೆ ಬದಲಾವಣೆಗಳಲ್ಲಿ ನನಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಮಗಾರಿಗಳ ಹಂಚಿಕೆಗೆ ಬೇಸರ
ಚಂದ್ರೇಗೌಡ ಮಾತನಾಡಿ, ನಮ್ಮ 33ನೇ ವಾರ್ಡ್‌ಗೆ ಅನುಮೋದಿಸಿದ ಕಾಮಗಾರಿಗಳನ್ನು ದೇವರಾಯಪಟ್ಟಣ ಕ್ರಿಶ್ಚಿಯನ್ ಕಾಲನಿಗೆ ವರ್ಗಾವಣೆ ಮಾಡಲಾಗಿದೆ. ನನ್ನ ಮತದಾರರಿಗೆ ನಾನು ಏನು ಉತ್ತರ ಕೊಡಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಮುಂದಿನ ದಿನಗಳಲ್ಲಿ ವಾರ್ಡ್‌ಗೆ ಸಂಬಂಧಿಸಿದ ಕಾಮಗಾರಿಗಳು ನಿರ್ವಿಘ್ನವಾಗಿ ನಡೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಶ್ವಿನಿ ಮಹೇಶ್, ಗುಂಡಿಗಳನ್ನು ಮುಚ್ಚದೇ ಇದ್ದರೂ ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಹಣ ಬಿಡುಗಡೆ ಮಾಡಿರುವುದು ಗಂಭೀರ ದೋಷ ಎಂದು ಆರೋಪಿಸಿದರು. ಮಹಾಪೌರರು, ಇಂತಹ ಪ್ರಕರಣಗಳು ದೃಢಪಟ್ಟರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸ್ಥಾಯಿ ಸಮಿತಿ ರಚನೆಗೆ ಒತ್ತಾಯ
ಮಂಜುನಾಥ್ ಮತ್ತು ರಕ್ಷಿತ್ ಮಾತನಾಡಿ, ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ರಚನೆ ಆಗದೆ ಇರುವುದೇ ಅನೇಕ ಅಕ್ರಮಗಳ ಮೂಲ ಕಾರಣ. ಈಗಲಾದರೂ ಸಮಿತಿಯನ್ನು ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಕೆಲವು ಸದಸ್ಯರು ನಮ್ಮ ಅವಧಿ ಇನ್ನೂ ಕೇವಲ ಒಂದು ತಿಂಗಳು ಬಾಕಿ ಇದೆ. ಈ ವೇಳೆಗೆ ಹೊಸ ಸಮಿತಿ ಸಾಧ್ಯವಿಲ್ಲ ಎಂದರೆ, ಇನ್ನು ಕೆಲವರು ನಾವು ಈಗಾಗಲೇ ಕೋರ್ಟ್‌ನಲ್ಲಿ ಅವಧಿ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದೇವೆ. ಸಮಿತಿ ತಕ್ಷಣ ರಚನೆ ಮಾಡಬೇಕು ಎಂದು ಪಟ್ಟುಹಿಡಿದರು.
ಮಹಾಪೌರರು, ಮಹಾನಗರ ಪಾಲಿಕೆಯಾಗಿರುವುದರಿಂದ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಬೇಕು. ಅವರು ದಿನಾಂಕ ನಿಗದಿ ಮಾಡಿದ ಬಳಿಕ ಮಾತ್ರ ಆಯ್ಕೆ ಪ್ರಕ್ರಿಯೆ ಸಾಧ್ಯ. ಮುಂದಿನ ಸಭೆಯಲ್ಲಿ ಈ ವಿಷಯವನ್ನು ಇಟ್ಟು ಒಪ್ಪಿಗೆ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಶ್ರದ್ಧಾಂಜಲಿ, ಪರಿಹಾರ:
ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರು ಗಾಯಗೊಂಡಿದ್ದು, ಒಬ್ಬರು ಕರ್ತವ್ಯ ನಿರ್ವಹಣೆಯಲ್ಲಿದ್ದಾಗ ಸಾವಿಗೀಡಾದ ಹಿನ್ನೆಲೆಯಲ್ಲಿ ಅವರಿಗೆ ಪರಿಹಾರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.