ಸಮಾನ ವೇತನ ನೀಡದೆ ವಂಚನೆ

stike
ಹೂವಿನಹಡಗಲಿಯಲ್ಲಿ ಸಣ್ಣ ಏತ ನೀರಾವರಿ ಯೋಜನೆ ನಿರ್ವಾಹಕರು ಮತ್ತು ನೀರಗಂಟಿ ದಿನಗೂಲಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಚ್.ಎಂ.ಕೊಟ್ರೇಶ, ಉಪಾಧ್ಯಕ್ಷ ಎಚ್.ರುದ್ರಪ್ಪ, ಖಜಾಂಚಿ ಕೆ.ಭೀಮಪ್ಪ ಇತರರಿದ್ದರು.
Published on

ಹೂವಿನಹಡಗಲಿ: ವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಣ್ಣ ಏತ ನೀರಾವರಿ ಯೋಜನೆ ನಿರ್ವಾಹಕರು ಮತ್ತು ನೀರಗಂಟಿ ದಿನಗೂಲಿ ನೌಕರರ ಸಂಘದಿಂದ ಶುಕ್ರವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಯಿತು.

ಸಂಘದ ಕಾರ್ಯದರ್ಶಿ ಕೆ.ಷಣ್ಮುಖಪ್ಪ ಮಾತನಾಡಿ, ಹೂವಿನಹಡಗಲಿ ವಿಭಾಗದ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ನೀರಗಂಟಿಗಳು ಮತ್ತು ಪಂಪ್ ಆಪರೇಟರ್‌ಗಳಿಗೆ 2019ರಿಂದ ಹಾಜರಾತಿ, ವೇತನ, ಭವಿಷ್ಯನಿಧಿ, ವಿಮೆ ಸೇರಿ ಇತರ ಸೌಲಭ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಗುತ್ತಿಗೆದಾರರು ಮತ್ತು ಇಲಾಖೆ ಅಧಿಕಾರಿಗಳು ನೀಡದೆ ವಂಚಿಸುತ್ತಿದ್ದಾರೆ.

ತಿಂಗಳಿಗೆ 29 ರಿಂದ 30ದಿನ ಕೆಲಸ ತೆಗೆದುಕೊಂಡು ಕೇವಲ 13 ರಿಂದ 15ದಿನ ಮಾತ್ರ ಹಾಜರಾತಿ ತೋರಿಸಿ ಸಮಾನ ವೇತನ ನೀಡದೆ ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಸೌಲಭ್ಯಗಳನ್ನು ನಮಗೆ ಒದಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ. ಕಳೆದ ವರ್ಷ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ನೀಡಿದ್ದ ಭರವಸೆ ಈವರೆಗೆ ಈಡೇರಿಲ್ಲ.

ಲಿಖಿತವಾಗಿ ಭರವಸೆ

ಅವರು ಮೌಖಿಕವಾಗಿ ಹೇಳುವ ಬದಲು ಲಿಖಿತವಾಗಿ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಸಣ್ಣ ಏತ ನೀರಾವರಿ ಇಲಾಖೆಯ ಎಇಇ ವೆಂಕಟೇಶ್ ಮಾತನಾಡಿ, ಈ ಹಿಂದೆ ಕಾರ್ಯನಿರ್ವಹಿಸಲು ಕೆಲಸಗಾರರನ್ನು ಒದಗಿಸುತ್ತಿದ್ದ ಗುತ್ತಿಗೆದಾರರಿಗೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ನೋಟಿಸ್ ನೀಡಲಾಗಿದೆ.

2023-24ನೇ ಸಾಲಿನ 60 ಜನ ನೀರಗಂಟಿ ಹಾಗೂ ಪಂಪ್‌ಆಪರೇಟರ್‌ಗಳನ್ನು ಒಂದೇ ಗುತ್ತಿಗೆ ಏಜೆನ್ಸಿ ಅಡಿಯಲ್ಲಿ ನೇಮಕ ಮಾಡಿಕೊಂಡು ಅವರಿಗೆ ಹುದ್ದೆಗೆ ತಕ್ಕಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಒಂದು ತಿಂಗಳ ಕಾಲಾವಕಾಶ ನೀಡಿದಲ್ಲಿ ಎಲ್ಲ ಸಮಸ್ಯೆ ಪರಿಹರಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಇದಕ್ಕೊಪ್ಪದ ಪ್ರತಿಭಟನಾಕಾರರು ಲಿಖಿತ ರೂಪದಲ್ಲಿ ಬರೆದುಕೊಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.


ಸಂಘದ ಸಹಕಾರ್ಯದರ್ಶಿ ಟಿ.ಹನುಮಂತ, ಸದಸ್ಯರಾದ ಕಾಸೀಂ, ಉಮೇಶ್ ನಾಯ್ಕ, ವೀರಣ್ಣ, ಪಾಂಡುನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net