

ಎಚ್.ಡಿ.ಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲ ವರ್ಗದ ಮಹಿಳೆಯರಿಗೆ ಸಮಾನ ಅವಕಾಶ ನೀಡಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಹ್ಯಾಂಡ್‌ಪೋಸ್ಟ್‌ನ ಜೀವಿಕ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಂವಿಧಾನ ಔದ್ಯೋಗಿಕ ಅವಕಾಶ, ರಾಜಕೀಯ ಸ್ಥಾನಮಾನ, ಆಸ್ತಿಯಲ್ಲಿ ಪಾಲು ಮತ್ತು ಸಮಾನ ವೇತನಗಳಂತಹ ಅವಕಾಶ ನೀಡುವ ಮೂಲಕ ಮಹಿಳೆಯರಿಗೆ ವಿಶೇಷ ಗೌರವ ಕಲ್ಪಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಕೌಟುಂಬಿಕ ಸಮಸ್ಯೆಗಳ ಕುರಿತು ಮಾತಾನಾಡಿದ ವಕೀಲೆ ಸರಸ್ವತಿ, ಪ್ರತಿನಿತ್ಯ ಮಹಿಳೆ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಅವರಿಗೆ ಕಾನೂನು ಅರಿವಿನ ಅಗತ್ಯವಿದೆ. ನೊಂದ ಮಹಿಳೆಯರ ಪರವಾಗಿ ನಾವೆಲ್ಲರೂ ಧ್ವನಿಯಾಗಿ ಕೆಲಸ ಮಾಡಬೇಕಿದೆ. ಮಹಿಳಾ ಶೋಷಣೆ ತಡೆಗಟ್ಟಲು ಪುರುಷರ ಸಹಭಾಗಿತ್ವವೂ ಅತ್ಯಗತ್ಯವಾಗಿದೆ ಎಂದರು.
ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ.ನೂರಲಕುಪ್ಪೆ ಮಾತಾನಾಡಿ, ಗ್ರಾಮಾಂತರ ಪ್ರದೇಶದ ನಾವು ಸಂವಿಧಾನದ ಆಶಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ನಾವು ಆರ್ಥಿಕ ಸ್ವಾವಲಂಬಿಗಳಾಗಿ ಮುಂದೆ ಬರಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ನಾವು ಆಡಂಬರಕ್ಕೆ ಮತ್ತು ತೋರಿಕೆಯತ್ತಾ ಸಾಗುತ್ತಿದ್ದೇವೆ. ನಮ್ಮ ಮಕ್ಕಳ ಮದುವೆಗಾಗಿ ಲಕ್ಷಾಂತರ ರೂ. ಹಣವನ್ನು ವ್ಯಯ ಮಾಡುತ್ತಿದ್ದೆವೆ. ಇದನ್ನು ನಿಲ್ಲಿಸಿ ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು ಮತ್ತು ವರದಕ್ಷಿಣೆಯನ್ನು ಪ್ರೋತ್ಸಾಹಿಸಬಾರದೆಂದು ಕಿವಿಮಾತು ಹೇಳಿದರು.
ಪೊಲೀಸ್ ವೃತ್ತ ನಿರೀಕ್ಷಕ ಸಬ್ಬಿರ್ ಹುಸೇನ್, ಸಿಡಿಪಿಒ ಆಶಾ, ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಜಸ್ಸಿಲ್ಲಾ, ಕಾಡುಮನೆ ಪ್ರಸನ್ನ ಮತ್ತಿತರು ಮಹಿಳಾ ಸಮಸ್ಯೆಗಳ ಕುರಿತು ಮಾತಾನಾಡಿದರು. ಶಿವರಾಜ್ ಮತ್ತು ತಂಡ ಜಾಗೃತಿ ಗೀತೆಗಳನ್ನು ಹಾಡಿತು
ಒಕ್ಕೂಟದ ಅಧ್ಯಕ್ಷ ಮಹದೇವ್, ಮಲ್ಲಿಗಮ್ಮ, ಮಂಜುನಾಥ, ಲಕ್ಷ್ಮಮ್ಮ, ಜಯಮ್ಮ, ಸೋಮಣ್ಣ, ಜೀವಿಕ ಸಂಘಟನೆಯ ನಾಗರಾಜ್, ವೆಂಕಟೇಶ, ಮಹೇಶ್, ವಸಂತ, ಮಲ್ಲಿಗಮ್ಮ, ನಾಗಮ್ಮ, ಶೈಲಾ ಸುಧಾಮಣಿ, ನಂಜುಂಡಯ್ಯ, ಚಂದ್ರಶೇಖರ ಮೂರ್ತಿ ಬಸವರಾಜ್ ಮುಂತಾದವರು ಭಾಗವಹಿಸಿದ್ದರು.