

ಮೈಸೂರು: ಪ್ರಯತ್ನಶೀಲರಾದ ಎಲ್ಲರಿಗೂ ಈ ಸ್ಪರ್ಧಾ ಜಗತ್ತಿನಲ್ಲಿ ಸಮಾನವಾದ ಅವಕಾಶವಿದೆ ಎಂದು ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಹೇಳಿದರು.
ನಗರದ ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದಿಂದ ನಮ್ಮ ಆತ್ಮವಿಶ್ವಾಸದ ಮೂಲಕ ಗುರಿ ತಲುಪಲು ಸಾಧ್ಯ ಎಂಬ ವಿಷಯ ಕುರಿತು ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿಭೆ ಇದ್ದರೆ ಗುರಿಮುಟ್ಟಲು ಸಾಧ್ಯ. ಆತ್ಮವಿಶ್ವಾಸವಿದ್ದರೆ ಮಾತ್ರ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ಪ್ರತಿಭೆಗೆ ಯಾವುದೇ ಜಾತಿ-ಮತ-ಪಂಥವಿಲ್ಲ. ಪ್ರಯತ್ನಶೀಲರಾದ ಎಲ್ಲರಿಗೂ ಈ ಸ್ಪರ್ಧಾ ಜಗತ್ತಿನಲ್ಲಿ ಸಮಾನವಾದ ಅವಕಾಶವಿದೆ. ಹಾಗಾಗಿ ಎಲ್ಲರೂ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು.
ಪ್ರತಿಭೆ ಇದ್ದರೆ ಜಗತ್ತಿನೆಲ್ಲೆಡೆ ಗೌರವ ಸಂಪಾದಿಸಬಹುದು. ದೂರದೃಷ್ಟಿ, ವಿವೇಚನೆ, ಭವಿಷ್ಯದ ಬಗ್ಗೆ ಕಾಳಜಿ ವಿದ್ಯಾರ್ಥಿಗಳಲ್ಲಿ ಇರಬೇಕು. ಬುದ್ಧಿವಂತರಿಗೆ ಎಲ್ಲೆಡೆಯೂ ಅವಕಾಶವು ಸಿಗುತ್ತದೆ. ಹಾಗಾಗಿ ಜ್ಞಾನ, ಕೌಶಲ್ಯ ಮುಖ್ಯ ಎಂದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಎಸ್.ಶಿಲ್ಪಾ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ನಿರ್ದಿಷ್ಟ ಗುರಿಯಿರಬೇಕು. ಮನುಷ್ಯನಲ್ಲಿ ಇತರ ಜೀವಿಗಳಿಗಿಂತ ವಿಭಿನ್ನವಾದ ಕೌಶಲವಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮಲ್ಲಿ ಯೋಜನೆ, ಯೋಚನೆ ಇರಬೇಕು. ಗುರಿಯಿದ್ದರೆ ಸಾಲದು, ಅದನ್ನೇ ಸಾಧಿಸಲು ಸತತ ಪ್ರಯತ್ನ ಇದ್ದಾಗ ಮಾತ್ರ ನಾವು ಅಂದುಕೊಂಡ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.
ಟಾಟಾ ಮೋಟಾರ್ಸ್‌ನ ಅರಸ್ ಕಾರ್ ಶೋರೂಮ್ ಮುಖ್ಯ ವ್ಯವಸ್ಥಾಪಕಿ ಎಚ್.ಎಂ.ಶ್ವೇತಾ ಆರಾಧ್ಯ ಮಾತನಾಡಿದರು. ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಶಾರದಾ, ವಿದ್ಯಾರ್ಥಿನಿಯರಾದ ಲಕ್ಷ್ಮಿ, ಎನ್.ಹೇಮಾಶ್ರೀ, ರಚನಾ ಇತರರು ಇದ್ದರು.