

ಮಂಗಳೂರು: ಮೀನುಗಾರಿಕೆ ಶಿಕಾರಿ ರಜೆಯನ್ನು 60 ದಿನಗಳಿಂದ 90ಕ್ಕೆ ವಿಸ್ತರಣೆ, ಬೋಟಿನಲ್ಲಿ ಬಳಸಬೇಕಾದ ಇಂಜಿನ್ ಸಾಮರ್ಥ್ಯ, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲಿಂಗ್ ನಿಷೇಧ ಸಹಿತ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದೇಶಕ್ಕೆ ಏಕರೂಪ ನಿಯಮ ಅವಶ್ಯಕತೆ ಇದೆ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಸಾರಿಗೆ ಮತ್ತು ಬಂದರು ಸಚಿವ ಮಂಕಾಳ ಎಸ್.ವೈದ್ಯ ಪ್ರತಿಪಾದಿಸಿದ್ದಾರೆ.
ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಬೀದರ್, ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್, ಹಳೇ ವಿದ್ಯಾರ್ಥಿಗಳ ಸಂಘ, ಯಶಸ್ವೀ ಕಡಲ ಉತ್ಪನ್ನಗಳ ಕಂಪನಿ ಹಾಗೂ ಪಿಲ್ಲೈ ಅಕ್ವಾಕಲ್ಚರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಮೀನುಗಾರಿಕೆ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಮತ್ತು ಬಿಗ್ ಫಿಶ್: 2.0 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿಯೇ ಗುಜರಾತ್ ದೀರ್ಘ ಕಡಲ ಕಿನಾರೆ ಹೊಂದಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಕಡಲ ಕಿನಾರೆಯ ಉದ್ದ 320 ಕಿ.ಮೀ ಹೊಂದಿದೆ. ಕೆಲವು ರಾಜ್ಯಗಳ ವ್ಯಾಪ್ತಿ ಚಿಕ್ಕದು. ಕೆಲವು ವಿಷಯಗಳಲ್ಲಿ ಭಿನ್ನ ನಿಯಮ ರೂಪಿಸುವುದರಿಂದ ರಾಜ್ಯದ ಮೀನುಗಾರರಿಗೆ ಅನ್ಯಾಯವಾಗುತ್ತದೆ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ.ಭರತ್ ಶೆಟ್ಟಿ ವೈ, ಐವನ್ ಡಿಸೋಜ, ಮೇಯರ್ ಸುಧೀರ್ ಶೆಟ್ಟಿ, ಬೀದರ್ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಕೊಚ್ಚಿನ್ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿವಿ ಕುಲಸಚಿವ ಡಾ.ದಿನೇಶ್ ಕೈಲ್ಲಿ, ಯಶಸ್ವಿ ಕಡಲ ಉತ್ಪನ್ನಗಳ ಕಂಪನಿ ಆಡಳಿತ ಪಾಲುದಾರ ಸಾಧು ಸಾಲಿಯಾನ್, ಮೀನುಗಾರಿಕೆ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಮೇಶ್ ಎಂ.ಆರ್.ಅತಿಥಿಗಳಾಗಿದ್ದರು.
ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಪ್ರಸ್ತಾವನೆಗೈದರು.