ಹುಬ್ಬಳ್ಳಿ: ಕನಿಷ್ಠ ಪಿಂಚಣಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಬೆಳಗಾವಿಯ ಇಪಿಎಸ್ ಪಿಂಚಣಿದಾರರ ಸಂದ ಜಂಟಿ ಕ್ರಿಯಾ ಸಮಿತಿ ವತಿಯಿಂದ ನವೆಂಬರ್ 18ರಂದು ಹುಬ್ಬಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ಹಾಗೂ ಇಪಿಎ್ಒ ಅಧಿಕಾರಿಗಳಿಗೆ ಅನೇಕ ಬಾರಿ ತಮ್ಮ ಬೇಡಿಕೆ ಈಡೇರಿಸುವಂತೆ ವಿನಂತಿಸಿಕೊಳ್ಳಲಾಗಿದೆ. 2010ರಿಂದ ಇಲ್ಲಿಯವರೆಗೂ ಹಲವು ಚಳವಳಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಿತಿ ಪದಾಧಿಕಾರಿಗಳು ದೂರಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಸಮಸ್ಯೆ ತಿಳಿಸಲಾಗಿದೆ. ಈ ಬಗ್ಗೆ ಅವರ ಜತೆ ಚಚಿರ್ಸಬೇಕಾಗಿದೆ. ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಚರ್ಚೆಗೆ ಅವಕಾಶ ಸಿಗದೇ ಇದ್ದರೆ ಅವರ ಗೃಹ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು.
ಕರ್ನಾಟಕದ ಎಲ್ಲ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಸಂಘಟನೆಯ ಬ್ಯಾನರ್ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಸಮಿತಿ ಅಧ್ಯಕ್ಷ ರಾಜಶೇಖರ ಕೋಪರ್ಡೆ, ಪದಾಧಿಕಾರಿಗಳಾದ ಸಿ.ಕೆ. ಹಿರೇಮಠ, ಎಸ್.ಎಸ್. ಮಹಾಜನ, ಬಿ.ಎಲ್. ಮಂಟೂರ, ವೈ.ಎಸ್. ರಾಮಭದ್ರಯ್ಯ, ಕೆ.ಎಂ. ಅಶ್ವತ್ಥನಾರಾಯಣ ಇತರರು ತಿಳಿಸಿದ್ದಾರೆ.