

ಉಡುಪಿ: ಆದಿಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ದೈನಂದಿನ ಮಾರುಕಟ್ಟೆ ಹಾಗೂ ವಾರದ ಸಂತೆ ಸಂದರ್ಭದಲ್ಲಿ ಬಾಕಿ ಉಳಿದ ತರಕಾರಿಗಳನ್ನು ರಾಶಿ ಹಾಕಲಾಗುತ್ತಿದ್ದು, ಅಲ್ಲೇ ಕೊಳೆತು ಸೊಳ್ಳೆ ಉತ್ಪತ್ತಿಯ ತಾಣವಾಗುತ್ತಿವೆ. ಇದೇ ರೀತಿ ಮಲ್ಪೆ ಬಂದರಿನಲ್ಲೂ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಸಂಬಂಧಪಟ್ಟವರಿಗೆ ನಗರಸಭೆಯಿಂದ ನೋಟಿಸ್ ನೀಡಿ, ಸೂಕ್ತಕ್ರಮಕೃಗೊಳ್ಳದಿದ್ದರೆ ದಂಡ ವಿಧಿಸುವಂತೆ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಂಕ್ರಾಮಿಕ ರೋಗ ನಿಯಂತ್ರಣ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು.
ನಗರಸಭಾ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿನಿಲಯ ಹಾಗೂ ಶಾಲಾ ವಠಾರಗಳ ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಬೇಕು. ಶಾಲೆಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ನಗರಸಭೆ, ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅನುದಾನದ ಕೊರತೆ ಇದ್ದರೆ ನಗರಸಭೆಯಿಂದ ಶಾಲಾ ಪರಿಸರ ಸ್ವಚ್ಛಗೊಳಿಸಲಾಗುವುದು ಎಂದರು.
ಅಪೂರ್ಣ ಕಟ್ಟಡಗಳ ಬಗ್ಗೆ ಸರ್ವೆ ನಡೆಸಿ, ಪರಿಸರದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಹಾಗೂ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಸುತ್ತಮುತ್ತ ನೆಟ್ ಅಳವಡಿಸುವಂತೆ ಸಂಬಂಧಪಟ್ಟ ಬಿಲ್ಡರ್ಗಳಿಗೆ ನೋಟಿಸ್ ಜಾರಿಗೊಳಿಸಬೇಕು. ಈ ಬಗ್ಗೆ ನಗರಸಭಾ ಸದಸ್ಯರ ಸಹಕಾರ ಪಡೆದುಕೊಳ್ಳಬಹುದು ಎಂದರು.
ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, 2035ರೊಳಗೆ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಹೊಂದಲಾಗಿದೆ. ಈ ಬಾರಿ ಕೇವಲ 1 ಪ್ರಕರಣ ದಾಖಲಾಗಿದೆ. ನಗರದಲ್ಲಿ 68ಕ್ಕಿಂತ ಹೆಚ್ಚು ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, 10 ದಿನಕ್ಕೊಮ್ಮೆ ಈ ಪ್ರದೇಶಗಳಿಗೆ ಭೇಟಿ ನೀಡಿ ಾಗಿಂಗ್ ನಡೆಸಲಾಗುತ್ತಿದೆ. ಹೋಟೆಲ್ ರೂಂಗಳಿಗೆ ಮೆಶ್ ಅಳವಡಿಸುವುದನ್ನು ನಗರಸಭೆ ಕಡ್ಡಾಯಗೊಳಿಸಿದರೆ ಹೊರ ಜಿಲ್ಲೆ ಅಥವಾ ರಾಜ್ಯದಿಂದ ಬಂದವರಿಂದ ರೋಗ ಹರಡುವುದನ್ನು ತಡೆಯಬಹುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಿಡಿಪಿಐ ಕೆ. ಗಣಪತಿ, ಪೌರಾಯುಕ್ತ ರಾಯಪ್ಪ, ಪರಿಸರ ಅಧಿಕಾರಿ ಸ್ನೇಹಾ ಮೊದಲಾದವರು ಉಪಸ್ಥಿತರಿದ್ದರು.