ಪಿಂಚಣಿ ಸಮಸ್ಯೆ ಶೀಘ್ರ ಇತ್ಯರ್ಥ : ಕಾರ್ಮಿಕ ಸಚಿವ ಭೂಪೇಂದ್ರ ಯಾದವ್

udp-epf 1
Published on

ಉಡುಪಿ: ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರ್ಮಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಸಾಮಾಜಿಕ ಸೇವೆ ಎಂಬ ಭಾವನೆ ಹೊಂದಿರಬೇಕು. ಕರ್ತವ್ಯ ರೂಪದಲ್ಲಿ ಕೆಲಸ ಮಾಡಬೇಕು. ಪಿಂಚಣಿ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಭೂಪೇಂದ್ರ ಯಾದವ್ ಸೂಚನೆ ನೀಡಿದರು.

ಶನಿವಾರ ಮಣಿಪಾಲದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವತಿಯಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಾದೇಶಿಕ ಕಚೇರಿ ನೂತನ ಕಟ್ಟಡಕ್ಕೆ ದೆಹಲಿಯಿಂದ ವರ್ಚುವಲ್ ಮಾದರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ದೇಶಕಟ್ಟುವಲ್ಲಿ ಜೀವಪೂರ್ತಿ ಶ್ರಮ ವಹಿಸಿದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸೂಕ್ತ ಸಮಯದಲ್ಲಿ ಪಿಂಚಣಿ ದೊರೆಯಬೇಕು. ಭವಿಷ್ಯಕ್ಕೆ ಸುರಕ್ಷತೆ ಒದಗಿಸುವುದು ಅತೀ ಅಗತ್ಯ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ. ರಘುಪತಿ ಭಟ್, ಉಡುಪಿ ಜಿಲ್ಲೆ ರಚನೆಯಾಗಿ ಆ.27ಕ್ಕೆ 25 ವರ್ಷ ಪೂರ್ಣಗೊಳ್ಳುತ್ತಿದ್ದು, ಕಾರ್ಮಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪಿಎಫ್ ಕಚೇರಿ ಅತೀ ಅಗತ್ಯವಾಗಿದೆ. 7.90 ಕೋಟಿ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣಗೊಳ್ಳುತ್ತಿದ್ದು, 2 ವರ್ಷದಲ್ಲಿ ಸಾರ್ವಜನಿಕ ಸೇವೆ ಲಭ್ಯವಾಗಲಿದೆ. ಇಎಸ್‌ಐ ಆಸ್ಪತ್ರೆ ಹಾಗೂ ಪಿಎಫ್ ಕಚೇರಿಯಿಂದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪಿಎಫ್ ಕಮಿಷನರ್ ಮಾರುತಿ ಬೋಯಿ, ಪ್ರಾದೇಶಿಕ ಕಮಿಷನರ್ ಡಾ. ಅಜಯ್‌ಸಿಂಗ್ ಚೌಧರಿ, ಪ್ರಾದೇಶಿಕ ಆಯುಕ್ತ ಅಶ್ವಿನ್ ಕುಮಾರ್ ಗುಪ್ತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net