

ಕೆ.ಎಂ.ದೊಡ್ಡಿ: ಮದ್ದೂರು ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಮಲಿಂಗಯ್ಯ ಸೂಚಿಸಿದರು.
ಸಮೀಪದ ತೊರೆಬೊಮ್ಮನಹಳ್ಳಿ, ಕ್ಯಾತಘಟ್ಟ, ಚಿಕ್ಕರಸಿನಕೆರೆ ಹಾಗೂ ಎಸ್.ಐ. ಹೊನ್ನಲಗೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮೀಣ ಭಾಗದ ಮಕ್ಕಳು ರಜಾ ಸಮಯವನ್ನು ಅತ್ಯಂತ ಅರ್ಥಪೂರ್ಣವಾಗಿ ಕಳೆಯಲು 42 ಗ್ರಾಮ ಪಂಚಾಯಿತಿಗಳಲ್ಲೂ ಗ್ರಾಮ ಪಂಚಾಯತಿ ಅರಿವು ಕೇಂದ್ರ ಮತ್ತು ಸರ್ಕಾರಿ ಶಾಲೆಗಳ ಸಹಯೋಗದಿಂದ 21 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ಮನೆಗಳಲ್ಲಿ ಸುಮ್ಮನೆ ಕುಳಿತು ಕಾಲಾಹರಣ ಮಾಡದೆ ಶಿಬಿರದ ಸದುಪಯೋಗ ಕೊಂಡು ಶಿಬಿರದ ಚಟುವಟಿಕೆಯಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ತಾಂತ್ರಿಕ ಸಂಯೋಜಕ ಕೆ.ಆರ್.ರಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬೇಸಿಗೆ ಶಿಬಿರದ ಶಿಕ್ಷಕರು ಹಾಗೂ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.