

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರತಿಯೊಬ್ಬರೂ ಪರಿಸರ ಸ್ನೇಹಿ ಸಮಾಜ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ತಿಳಿಸಿದರು.
ತಾಲೂಕಿನ ಬೂದಿಹಾಲ್ ಗ್ರಾಪಂನ ಮಂಡಿಗೆರೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗದಿಂದ ಮಾಸ್ತಿವೆಂಕಟೇಶ್ ಅಯ್ಯಂಗಾರ್ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಕನ್ನಡ ರತ್ನಕೋಶ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಕವಿಗಳು ಪರಿಸರ ಸಂರಕ್ಷಣೆ ಬಗ್ಗೆ ಜನಸಾಮನ್ಯರಿಗೆ ಬರವಣಿಗೆ ಮೂಲಕ ಅರಿವು ಮೂಡಿಸಿದ್ದಾರೆ. ಆದರೆ ಇತ್ತೀಚೆಗೆ ಆಧುನಿಕತೆ ಬೆಳೆದಂತೆ ಪರಿಸರದ ಮೇಲಿನ ಕಾಳಜಿ ಕಡಿಮೆಯಾಗಿದೆ. ಆದ್ದರಿಂದ ಪರಿಸರ ರಕ್ಷಣೆ ಅನಿವಾರ್ಯವಾಗಿದೆ. ವಿಶೇಷವಾಗಿ ಮಕ್ಕಳು ಚಿಕ್ಕಂದಿನಿಂದಲ್ಲೇ ಪರಿಸರದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಪರಿಸರ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿ ಶಿಕ್ಷಣ ಇಲಾಖೆಯೊಂದಿಗೆ ಸಹಕಾರ ನೀಡುತ್ತಿರುವ ಸರ್ಕಾರೇತರ ಸಂಘ-ಸಂಸ್ಥೆಗಳ ಕಾರ್ಯ ಪ್ರಶಂಶನೀಯ. ತಾಲೂಕಿನಾದ್ಯಂತ ಕನ್ನಡ ಸಾಂಸ್ಕೃತಿಕ ರಂಗ ಸರ್ಕಾರಿ ಶಾಲಾ ಮಕ್ಕಳಿಗೆ ಕನ್ನಡ ರತ್ನಕೋಶ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಶಾಲಾ ಆವರಣದಲ್ಲಿ ಹತ್ತಾರು ಗಿಡ ನೆಟಲಾಯಿತು. ಮಕ್ಕಳಿಗೆ ಕನ್ನಡ ರತ್ನಕೋಶ ವಿತರಿಸಲಾಯಿತು. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಶಾಲೆ ವಿದ್ಯಾರ್ಥಿನಿ ಮೋನಿಕಾ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಬೈಲಪ್ಪ, ಗೋವಿಂದರಾಜು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದ್ದರು.