ಕೈಗಾರಿಕಾ ಪಾರ್ಕ್‌ಗೆ ಜಲಮೂಲ ಬಲಿ : ಮೊಳೆಯಾರ್ ಮುಂಡೋಳ್‌ನಲ್ಲಿ ಪರಿಸರ ಮಾರಕ ಕೆಲಸ : ಸ್ಥಳೀಯರ ವಿರೋಧ

New Project (18)
Published on

ಬದಿಯಡ್ಕ: ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಿರುವ ವಿರುದ್ಧ ನೀರ್ಚಾಲು ಸಮೀಪದ ಮೊಳೆಯಾರ್ ಮುಂಡೋಳ್ ಕೈಗಾರಿಕಾ ಪಾರ್ಕ್ ವಿರೋಧಿಸಿ ಪ್ರತಿಭಟನೆ ಆರಂಭವಾಗಿದೆ.

ನೀರ್ಚಾಲು ಗ್ರಾಮದ ಬೇಳದ 12 ಎಕರೆ ಜಾಗದಲ್ಲಿ ಕೈಗಾರಿಕಾ ಪಾರ್ಕ್‌ಗೆ ಸ್ಥಳ ಗುರುತಿಸಿದ್ದು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಸುತ್ತಮುತ್ತಲಿನ ರೈತರು ಕೃಷಿ ಕ್ಷೇತ್ರಕ್ಕೆ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಜಲಮೂಲಕ್ಕೆ ಮಣ್ಣು ತುಂಬುವ ಮೂಲಕ ಕೈಗಾರಿಕಾ ಪಾರ್ಕ್ ಕಾರ್ಯಾಚರಣೆ ಪ್ರಾರಂಭವಾಗಿದೆ.

ಕಾಸರಗೋಡು ಕೇರಳ ಸೇರ್ಪಡೆಗೆ ಹಿಂದೆಯೇ ಅಂದು ಪುತ್ತೂರು ತಹಶೀಲ್ ವ್ಯಾಪ್ತಿಗೊಳಪಟ್ಟ ಸ್ಥಳವಾಗಿದ್ದಾಗ, ಆ ಸಂದರ್ಭದ ಎಡಿಎಂ ಈ ಪ್ರದೇಶದ ಪ್ರಾಕೃತಿಕ ನೀರೊರತೆ ಸಾರ್ವಜನಿಕವೆಂದು ಘೋಷಿಸಿ ದಾಖಲೆಗೊಳಿಸಿದ್ದರು. ಆ ಬಳಿಕ ಕೇರಳ ಕಂದಾಯ ಇಲಾಖೆಯೂ ಇದನ್ನು ಮಾನ್ಯ ಮಾಡಿ ಹಿಂದಿನ ಆದೇಶ ಊರ್ಜಿತಗೊಳಿಸಿ ಈವರೆಗೂ ಮುಂದುವರಿದು ಬಂದಿತ್ತು.

ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಈ ಭಾಗದ ಮೂರು ಕಿ.ಮೀ ಜಮೀನಿಗೆ ಅಗತ್ಯ ನೀರು ಹರಿದು ಬರುತ್ತಿದ್ದ ಕಾಲುವೆಗೆ ಎಸ್ಟೇಟ್ ನೆಪದಲ್ಲಿ ಇದೀಗ ಮಣ್ಣು ತುಂಬಿಸಲಾಗಿದೆ. ಒಂದೆಡೆ ಕೆರೆಕಟ್ಟೆ ತುಂಬಿ, ಇನ್ನೊಂದೆಡೆ ಪ್ರಕೃತಿ ವಿನಾಶ ಮಾಡುವ ಕೆಮಿಕಲ್ ಫ್ಯಾಕ್ಟರಿ ಮತ್ತಿತರ ಸಂಬಂಧಿ ಸಂಸ್ಥೆಗಳು ಇಲ್ಲಿ ಆರಂಭವಾಗಿದ್ದು, ಇದರಿಂದ ಕೃಷಿ ಕ್ಷೇತ್ರದ ಅಧಃಪತನವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇಂತಹ ಕೈಗಾರಿಕೆಯನ್ನು ಯಾವುದೇ ಬೆಲೆ ತೆತ್ತಾದರೂ ವಿರೋಧಿಸುತ್ತೇವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ರೈತ ಗಣೇಶ್ ಅಳಕ್ಕೆ ಅವರ ಅಧ್ಯಕ್ಷತೆಯಲ್ಲಿ ಪರಿಸರ ಸಂರಕ್ಷಣಾ ಸಮಿತಿ ರಚಿಸಿ ಜಿಲ್ಲಾಧಿಕಾರಿ, ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ, ಕಂದಾಯ, ಸ್ಥಳೀಯ ಸ್ಥಳೀಯಾಡಳಿತ ಇಲಾಖೆ ಮತ್ತಿತರರಿಗೆ ದೂರು ಸಲ್ಲಿಸಲಾಗಿದೆ.

ಯಾವ ಬೆಲೆ ತೆತ್ತಾದರೂ ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಬಿಟ್ಟುಕೊಡಲಾಗದು. ಪ್ರಾಕೃತಿಕ ನೀರ ಸೆಲೆ ಮುಚ್ಚಿರುವುದು ಮುಂದಿನ ದಿನಗಳಲ್ಲಿ ವಯನಾಡಿನಂತಹ ಭಾರಿ ಪ್ರಕೃತಿ ವಿಕೋಪಕ್ಕೆ ಕಾರಣವಾಗಲಿದೆ. ವೇಗದ ನೀರಿನ ಹರಿವನ್ನು ತಡೆದಿರುವುದು ಭೂಕುಸಿತದ ಭೀತಿ ತರಲಿದೆ. ಈ ನಿಟ್ಟಿನಲ್ಲಿ ಉನ್ನತಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಮನವಿ ನೀಡಲಾಗಿದ್ದು, ನಿರ್ಮಾಣ ನಿಲ್ಲಿಸದಿದ್ದರೆ ಹೈಕೋರ್ಟ್ ಮೊರೆ ಹೋಗಲಾಗುವುದು. ಗಣೇಶ್ ಭಟ್ ಅಳಕ್ಕೆ ನೀರ್ಚಾಲು ಮೊಳೆಯಾರ್ ಪ್ರಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ https://www.vijayavani.net/indian-army-day https://www.vijayavani.net/inauguration-of-rickshaw-stand-at-renja

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net