

ಮಧುಗಿರಿ : ಗಣೇಶನ ಹಬ್ಬವೆಂದರೆ ಎಲ್ಲೆಡೆ ಸಡಗರ, ಸಂಭ್ರಮ ಸಹಜ, ಹಾಗೇಯೆ ಹಬ್ಬದ ಬಳಿಕ ವಿನಾಯಕನ ವಿಸರ್ಜನೆಯಿಂದ ಕೆರೆ-ಕಟ್ಟೆಗಳ ನೀರು ಮಲಿನವಾಗುವುದೂ ಅಷ್ಟೇ ಸತ್ಯ, ಇದಕ್ಕೆಲ್ಲ ಕಡಿವಾಣ ಹಾಕುವ ದೃಢ ಸಂಕಲ್ಪದಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶ ಅಭಿಯಾನದಲ್ಲಿ ತೊಡಗಿದ್ದಾರೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ, ಶಿರಾ, ಮಧುಗಿರಿ ಮತ್ತು ಕೊರಟಗೆರೆ ತಾಲೂಕಿನ ಸುಮಾರು 11 ಸಾವಿರ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಕೊಂಡಿದ್ದು, ಅದರಲ್ಲಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ಪರಿಸರಸ್ನೇಹಿ ಗಣಪನ ತಯಾರಿಯಲ್ಲಿ ನಿರತರಾಗಿದ್ದಾರೆ, ಆಗಸ್ಟ್ ಆರಂಭದಿಂದಲೇ ಈ ಅಭಿಯಾನ ಕೈಗೊಂಡಿದ್ದಾರೆ. ಪ್ರತಿ ವಿದ್ಯಾರ್ಥಿ ಮನೆಯಲ್ಲೇ ಮೈದಾಹಿಟ್ಟು, ಗೋಧಿಹಿಟ್ಟು, ಅರಿಶಿಣ, ಸ್ವಲ್ಪ ಎಣ್ಣೆ ಹಾಗೂ ಇತರ ಸೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರಸ್ನೇಹಿ ಗಣಪನನ್ನು ಪೂಜಿಸುವ ಸಂದೇಶ ನೀಡುತ್ತಿದ್ದು, ಕರೊನಾ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಮನೆಯಲ್ಲೇ ಹಬ್ಬ ಆಚರಿಸುವ ಅರಿವು ಸಹ ಮೂಡಿಸುತ್ತಿದ್ದಾರೆ.
ಬಹಳಷ್ಟು ಸುಂದರ ಈ ವಿಘ್ನ ನಿವಾರಕ: ಮಕ್ಕಳ ಕೈಯಲ್ಲಿ ಅರಳಿರುವ ಗಣೇಶ ಮೂರ್ತಿಗಳು ಸುಂದರವಾಗಿವೆ, ವಿನಾಯಕನಿಗೆ ಅರ್ಪಿಸುವ ಹೂವುಗಳನ್ನೂ ಸಹ ಪೇಪರ್ ಬಳಸಿ ತಯಾರಿಸಿದ್ದಾರೆ. ತಮ್ಮ ಅಕ್ಕಪಕ್ಕದ ಮನೆಗಳಿಗೆ ತೆರಳಿ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಮೂರ್ತಿಗಳಿಂದ ಹೇಗೆಲ್ಲ ಪರಿಸರ ಮಲಿನವಾಗುತ್ತಿದೆ ಎಂಬುದರ ಮನವರಿಕೆ ಮಾಡಿಕೊಟ್ಟು, ಪರಿಸರ ಸ್ನೇಹಿ ಗಣಪತಿಮೂರ್ತಿ ತಯಾರಿಸಿ ಅವರಿಗೆ ಉಡುಗೊರೆಯಾಗಿ ನೀಡಿ ಮನೆಯಲ್ಲಿ ಪ್ರತಿಷ್ಠಾಪಿಸಲು ಮನವೊಲಿಸುತ್ತಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಕರೊನಾ ಸೇನಾನಿಗಳಾಗಿ ಕೆಲಸ ನಿರ್ವಹಿಸಿದ ಸೇವೆಗೆ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಮತ್ತು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಪ್ರಶಸ್ತಿಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಪರಿಸರಸ್ನೇಹಿ ಗಣಪನ ತಯಾರಿಯಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ ಪರಿಸರದ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾಸ್ಕರ್ ರೆಡ್ಡಿ ಜಿಲ್ಲಾ ಮುಖ್ಯ ಆಯುಕ್ತ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪರಿಸರಸ್ನೇಹಿ ಗಣಪನ ತಯಾರಿಯಲ್ಲಿ ತೊಡಗಿದ್ದು, ಪ್ರತಿಯೊಬ್ಬರೂ ಇದನ್ನು ಆದರ್ಶವಾಗಿ ತೆಗೆದುಕೊಂಡಲ್ಲಿ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು. ಪುರಸಭೆಯಿಂದ ವಿನಾಯಕನ ವಿಸರ್ಜನೆಗೆ 2 ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿದ್ದು, ಕೆರೆ-ಕಟ್ಟೆಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬಾರದು. ಮಾಹಿತಿಗೆ ಕಿರಿಯ ಆರೋಗ್ಯ ನೀರೀಕ್ಷಕರ ಸಂಖ್ಯೆಗೆ 9141609077 ಕರೆ ಮಾಡಬಹುದು. ಅಮರ್‌ನಾರಾಯಣ್, ಮುಖ್ಯಾಧಿಕಾರಿ ಪುರಸಭೆ ಮಧುಗಿರಿ