

ಉಡುಪಿ: ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗುವ ಯೋಜನೆ ಜಾರಿ ಅನಗತ್ಯ. ಪರಿಸರಕ್ಕೆ ಹಾನಿಯಾಗದಂತಹ ಪೂರಕ ಯೋಜನೆ ರೂಪಿಸುವ ಅಗತ್ಯ ಇದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಮಣಿಪಾಲದಲ್ಲಿ ಜಯಶ್ರೀಕೃಷ್ಣ ಪರಿಸರ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಕೈಗಾರಿಕೆಗಳಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಉತ್ತೇಜನ ಸಮ್ಮೇಳನದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕೆಲಸ ನಡೆಯಬೇಕು. ಹುಬ್ಬಳ್ಳಿ&ಅಂಕೋಲಾ ರೈಲ್ವೆ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದೆವು. ಆದರೆ, ಪರಿಸರ ಹೋರಾಟಗಾರರು ಕೋರ್ಟ್ ಮೆಟ್ಟಿಲು ಏರಿದ್ದರಿಂದ ಯೋಜನೆ ಸ್ಥಗಿತವಾಯಿತು. ಈ ನಿಟ್ಟಿನಲ್ಲಿ ಅವಲೋಕಿಸಿದಾಗ ಪರಿಸರ ರಕ್ಷಣೆ ಮತ್ತು ಅಭಿವೃದ್ಧಿ ಜತೆಯಾಗಿ ಸಾಗಬೇಕು ಎಂದರು.
ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳು ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಂಡು ಕಾರ್ಯನಿರ್ವಹಿಸಬಹುದು. ಕೈಗಾರಿಕೆ ಮತ್ತು ಹೂಡಿಕೆದಾರರು ನಮ್ಮಲ್ಲಿ ಬರಬೇಕಾದರೆ ಉತ್ತಮ ಮೂಲ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಸರ್ಕಾರ ಮಾಡಬೇಕು ಎಂದರು.
ಸಮಿತಿ ಅಧ್ಯಕ್ಷ ಎಲ್.ವಿ. ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವಾನ್ ಡಿಸೋಜಾ, ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಮುಖರಾದ ಜಗದೀಶ್ ಅಧಿಕಾರಿ, ಸುರೇಂದ್ರ ಮೆಂಡನ್, ತುಳಸೀದಾಸ್ ಎಲ್. ಅಮೀನ್ ಉಪಸ್ಥಿತರಿದ್ದರು.