15 ಸಾವಿರ ಗಿಡನೆಟ್ಟ ಪರಿಸರ ಪ್ರೇಮಿ

Oplus_0
ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಭಾನುವಾರ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಗಿಡನೆಡುವ ಮೂಲಕ ಚಾಲನೆ ನೀಡಿದರು.
Published on

ಯಳಂದೂರು: ಜಿಲ್ಲಾದ್ಯಂತ ಸುಮಾರು 15 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಸ್ಯಕ್ರಾಂತಿಗೆ ಕಾರಣರಾದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ಸಿ.ಎಂ. ವೆಂಕಟೇಶ್ ಪರಿಸರ ಪ್ರೇಮಿಗಳಿಗೆ ಮಾದರಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತತಪಡಿಸಿದರು.

ಸಿ.ಎಂ. ವೆಂಕಟೇಶ್ ನೇತೃತ್ವದ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮಿಗಳ ಹುಟ್ಟುಹಬ್ಬದ ನಿಮಿತ್ತ ಭಾನುವಾರ ತಾಲೂಕಿನ ಯರಿಯೂರು ಗ್ರಾಮವನ್ನು ಹಸಿರು ಗ್ರಾಮವಾಗಿಸುವ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ 948ರ ರಸ್ತೆಯ ಎರಡು ಬದಿಯಲ್ಲಿ 250 ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪರಿಸರ ಪ್ರೇಮಿ ಸಿ.ಎಂ. ವೆಂಕಟೇಶ್ ಚಾಮರಾಜನಗರ ಜಿಲ್ಲೆಯನ್ನು ಹಸರೀಕರಣ ಮಾಡುವ ನಿಟ್ಟಿನಲ್ಲಿ ತೊಡಗಿದ್ದಾರೆ. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದರೂ ಸಹ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿಯಾಗಿರುವ ಇವರು ಯರಿಯೂರು ಗ್ರಾಮವನ್ನು ಹಸಿರು ಗ್ರಾಮವನ್ನಾಗಿ ಮಾಡಲು ಪಣ ತೊಟ್ಟಿರುವುದು ಸಂತಸ ಸಂಗತಿಯಾಗಿದೆ.

ಇದುವರೆಗೂ ಜಿಲ್ಲಾದ್ಯಂತ ಹಸಿರು ಕ್ರಾಂತಿ ಸೃಷ್ಟಿಸಿರುವ ಇವರು 15 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವುದು ಮಾತ್ರವಲ್ಲದೆ, ಅವುಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಈ ಪರಿಸರ ಸೇವೆಯನ್ನು ಪರಿಗಣಿಸಿ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳು ದೊರೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಅಪ್ರತಿಮ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರಂತೆ ಜಿಲ್ಲೆಯವರೇ ಆದ ಸಿಎಂ ವೆಂಕಟೇಶ್ ಅವರ ಪರಿಸರ ಸಂರಕ್ಷಣೆಯ ಸೇವೆ ಅಪ್ರತಿಮವಾದದು ಎಂದು ಬಣ್ಣಿಸಿದರು.

ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಹಾಗೂ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಸಿ. ಎಂ.ವೆಂಕಟೇಶ್ ಮಾತನಾಡಿ, ಇಂದು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹುಟ್ಟುಹಬ್ಬದ ನಿಮಿತ್ತ ಯಳಂದೂರು ತಾಲೂಕಿನ ಯರಿಯೂರು ಗ್ರಾಮವನ್ನು ಹಸಿರು ಗ್ರಾಮವಾಗಿಸಲು ರಾಷ್ಟ್ರೀಯ ಹೆದ್ದಾರಿ 948ರ ರಸ್ತೆಯ ಎರಡು ಬದಿಯಲ್ಲಿ 250 ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದಲ್ಲದೆ ಜಿಲ್ಲಾದ್ಯಂತ ಪ್ರಸಿದ್ಧ ಸಾಧಕರ ಹೆಸರಿನಲ್ಲಿ ಅವರ ನೆನಪಿನಾರ್ಥಕ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೆ ಅವುಗಳಿಗೆ ಸೂಕ್ತ ಪಾಲನೆ ಪೋಷಣೆಯನ್ನು ನೀಡಿ, ಎಲ್ಲ ಸವಾಲುಗಳಿಂದ ಅವುಗಳನ್ನು ರಕ್ಷಿಸಿಕೊಂಡು ಬರಲಾಗುತ್ತದೆ. ಇದೊಂದು ನಿರಂತರ ಪ್ರಕ್ರಿಯೆ ಎಂದರು.

ಕಾರಾಪುರ ವಿರಕ್ತ ಮಠದ ಶ್ರೀ ಬಸರಾಜಸ್ವಾಮಿ ಒಡೆಯರ್ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀಧರ್, ಗ್ರಾಮಸ್ಥರಾದ ಡಾ.ಶ್ರೀಕಂಠಮೂರ್ತಿ ಪಿಡಿಒ ಶಿವಕುಮಾರ್, ಜಯಣ್ಣ, ಪ್ರಕಾಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net