ಫೇಸ್​​ಬುಕ್​ನಲ್ಲಿ ಪೋಸ್ಟ್​​ ಹಾಕಿ ಆತ್ಮಹತ್ಯೆಗೆ ಶರಣಾದ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ

bhoohalli puttaswamy
Published on

ಬೆಂಗಳೂರು: ಸಾಹಿತಿ ಹಾಗೂ ಪರಿಸರವಾದಿಯಾಗಿ ಗುರುತಿಸಿಕೊಂಡಿರುವ ಭೂಹಳ್ಳಿ ಪುಟ್ಟಸ್ವಾಮಿ (76) ಭಾನುವಾರ ತಡ ರಾತ್ರಿ ಚನ್ನಪಟ್ಟಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸ್ವಗ್ರಾಮದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಪುಟ್ಟಸ್ವಾಮಿ ಅವರ ಕುಟುಂಟ ಮೈಸೂರಿನಲ್ಲಿ ನೆಲೆಸಿತ್ತು. ಆದರೆ ಪುಟ್ಟಸ್ವಾಮಿ ಅವರ ಕುಟುಂಬ ಮೈಸೂರಿನಲ್ಲಿ ನೆಲೆಸಿತ್ತು. ಪುಟ್ಟಸ್ವಾಮಿ ಅವರು ಮಾತ್ರ ಚನ್ನಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಆಗಾಗ ಮೈಸೂರಿಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ 'ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡ ಜೀವನ ಯಾತ್ರೆ ಮುಗಿಸುತ್ತಿದ್ದೇನೆ. 28.07.24 ರಾತ್ರಿ 2.40 ಇತಿ ಭೂಹಳ್ಳಿ ಪುಟ್ಟಸ್ವಾಮಿ' ಎಂದು ಪೋಸ್ಟ್ ಮಾಡಿ ಚನ್ನಪಟ್ಟಣದಲ್ಲಿ ನೇಣಿಗೆ ಶರಣಾಗಿದ್ದಾರೆ.

ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ಪುಟ್ಟಸ್ವಾಮಿ ಅವರು ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು. ಸುಮಾರು 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪುಟ್ಟಸ್ವಾಮಿ ಭಾಜನರಾಗಿದ್ದರು.

ಕವಿ, ಪರಿಸರವಾದಿ, ಸಮಾಜಮುಖಿ ಚಿಂತಕ, ನಿವೃತ್ತ ಪ್ರಾಧ್ಯಾಪಕರಾಗಿದ್ದ ಪುಟ್ಟಸ್ವಾಮಿ ಅವರು, ಸ್ವಂತ ಹಣದಲ್ಲಿ ತಾಲ್ಲೂಕಿನ ವಿವಿಧೆಡೆ ಸರ್ಕಾರಿ ಜಾಗಗಳಲ್ಲಿ ಗಿಡನೆಟ್ಟು ಬೋಳು ಜಾಗ ಮತ್ತು ಭೂಮಿಯನ್ನೆಲ್ಲಾ ವನವನ್ನಾಗಿಸುತ್ತಾ ಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net