

ಮಂಗಳೂರು: ಸಂವಿಧಾನದ 48ಎ ವಿಧಿಯ ಪ್ರಕಾರ ಪರಿಸರ ಮತ್ತು ವನ್ಯ ಜೀವಿಗಳ ಸಂರಕ್ಷಣೆಗೆ ಸರ್ಕಾರ ಇನ್ನಾದರೂ ಮುಂದಾಗಬೇಕು ಎಂದು ಮಂಗಳೂರಿನ ತಣ್ಣೀರುಬಾವಿಯ ಟ್ರೀ ಪಾರ್ಕ್‌ನಲ್ಲಿ ಜರುಗಿದ ಪರಿಸರ ಸಮ್ಮೇಳದ ಮೂಲಕ ಪರಿಸರಾಸಕ್ತರು ಹಾಗೂ ಹೋರಾಟಗಾರು ಹಕ್ಕೊತ್ತಾಯ ಮಂಡಿಸಲು ನಿರ್ಣಯ ಕೈಗೊಂಡಿದ್ದಾರೆ.
ಸುಕ್ರಿ ಬೊಮ್ಮಗೌಡ, ತುಳಸೀಗೌಡ, ಸಾಲುಮರದ ತಿಮ್ಮಕ್ಕ ಮೊದಲಾದವರು ಕಷ್ಟ ಪಟ್ಟು ಮರಗಳನ್ನು ಬೆಳೆಸುತ್ತಿದ್ದರೆ, ಸರ್ಕಾರ ವಿವಿಧ ಯೋಜನೆಗಳ ಹೆಸರಿನಲ್ಲಿ ಮರಗಳ ನಾಶಕ್ಕೆ ಮುಂದಾಗಿದೆ. ಹೀಗೆಯೇ ಮುಂದುವರಿದರೆ ಪ್ರಾಣಿ ಸಂಕುಲಕ್ಕೆ ಮಾತ್ರವಲ್ಲದೆ ಮನುಷ್ಯರಿಗೂ ಅಪಾಯ ಖಚಿತ. ಇದರ ಮುನ್ಸೂಚನೆ ಹಿಂದಿನ ಎರಡು ವರ್ಷದ ಮಳೆಗಾಲದಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಗೋಚರಿಸಿದೆ. ಆದ್ದರಿಂದ ಇನ್ನು ಮುಂದಾದರೂ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಲಾಯಿತು. ಪರಿಸರ ಸಮ್ಮೇಳನದಲ್ಲಿ ಎರಡು ಅವಧಿಯಲ್ಲಿ ಜರುಗಿದ ನ್ಯಾಯಾಲಯ ಪ್ರಕ್ರಿಯೆಯಲ್ಲಿ ಎತ್ತಿನಹೊಳೆ ಸೇರಿದಂತೆ ವಿವಿಧ 36 ಪ್ರಕರಣಗಳ ಕುರಿತು ವಿಚಾರಣೆ ನಡೆಸಲಾಯಿತು.
ಡಾ.ರವೀಂದ್ರನಾಥ ಶ್ಯಾನುಭಾಗ್ ಮುಖ್ಯನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದರು. ಸಂವಿಧಾನದ 48ಎ, 51ನೇ ವಿಧಿಗಳ ಪ್ರಕಾರ ಪರಿಸರ ಸಂರಕ್ಷಣೆಯಲ್ಲಿ ಜನರದ್ದೂ ಪಾಲು ಇದೆ. ಈ ಜವಾಬ್ದಾರಿಯನ್ನು ಕೂಡ ನಿರ್ವಹಿಸಬೇಕು ಎಂದವರು ಎಚ್ಚರಿಸಿದರು.
ಕಾರ್ಯಕ್ರಮ ಸಂಯೋಜಕರಾಗಿರುವ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಎನ್‌ಇಸಿಎಫ್‌ನ ಶಶಿಧರ ಶೆಟ್ಟಿ ಹಾಜರಿದ್ದು, ವಿವಿಧ ಪರಿಸರ ನಾಶ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ಎತ್ತಿನಹೊಳೆ ಸೇರಿದಂತೆ ವಿವಿಧ ಪರಿಸರ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಡಾ.ರವೀಂದ್ರನಾಥ ಶ್ಯಾನುಭೋಗ್ ಅವರಿಗೆ ‘ನ್ಯಾಯಶ್ರೀ’, ಸುಕ್ರಿ ಬೊಮ್ಮಗೌಡ ಮತ್ತು ಕುತ್ತಾರು ತಿಮ್ಮಕ್ಕ ಅವರಿಗೆ ‘ಜನಪದ ಶ್ರೀ’ ಪ್ರಶಸ್ತಿ, ತುಳಸಿಗೌಡ ಹಾಗೂ ಡಿಯಾಗೋ ಬಸ್ತ್ಯಾವ್ ಸಿದ್ಧಿ ಅವರಿಗೆ ‘ವನಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಡ್ಗೀಳ್ ವರದಿ ಜಾರಿಗೆ ಒತ್ತಾಯ
ಪಶ್ಚಿಮಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ, ಯೋಜನೆಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಮರಗಳನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸಬೇಕು ಎಂದು ಶಿವಮೊಗ್ಗದ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಆಗ್ರಹಿಸಿದರು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಶ್ಯಾನುಭಾಗ್ ಹೇಳಿದರು. 1994ರಲ್ಲಿ ಕೊಜೆಂಟ್ರಿಕ್ಸ್ ಯೋಜನೆಗಾಗಿ ನ್ಯಾಯಾಲಯವೇ ಅನುಮತಿ ನೀಡಿದ್ದನ್ನು ಪ್ರಸ್ತಾವಿಸಿ ಅಸಹಾಯಕತೆ ವ್ಯಕ್ತಪಡಿಸಿದರು.
ತೀರಕ್ಕೆ ಬಾರದ ಕಡಲಾಮೆ
ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರ ಭಾರಿ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ತೀರಕ್ಕೆ ಬಂದು ಮೊಟ್ಟೆ ಇಡುತ್ತಿದ್ದ ಕಡಲಾಮೆಗಳು ಏಳು ವರ್ಷಗಳಿಂದ ದಡಕ್ಕೆ ಬಂದಿಲ್ಲ. ಸರ್ಕಾರ ಈ ವಿಚಾರದ ಕುರಿತು ಗಂಭೀರ ಚಿಂತನೆ ನಡೆಸುವ ಅವಶ್ಯಕತೆಯಿದೆ ಎಂದು ಸಂಶೋಧನಾ ವಿದ್ಯಾರ್ಥಿ ಮಮತಾ ಕೆ.ಎಸ್. ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದರು. ಯುನೆಸ್ಕೋ ಗುರುತಿಸಿದ 16 ಅಳಿವಿನಂಚಿನ ಜೀವಿಗಳ ಪೈಕಿ ಒಂದಾಗಿರುವ ಕಾಳಿಂಗ ಸರ್ಪದ ಸಂತತಿ ಪಶ್ಚಿಮ ಘಟ್ಟದಲ್ಲಿ ತೀವ್ರವಾಗಿ ನಶಿಸುತ್ತಿರುವುದು, ವಿಷಕಾರಿ ಹೊಗೆಯುಗುಳುವ ವಾಹನಗಳಿಂದ ವಾಯುಮಾಲಿನ್ಯ ಮೊದಲಾದ ವಿಚಾರಗಳ ಕುರಿತು ಕಲಾಪದಲ್ಲಿ ಚರ್ಚಿಸಲಾಯಿತು. ಶಾಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತ ಪಠ್ಯಗಳಿವೆ. ಶಾಲೆಯಲ್ಲಿ ಪರಿಸರ ಕುರಿತ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಜ್ಯೋತ್ಸ್ನಾನ್ಯಾಯಾಧೀಶರ ಮುಂದೆ ಅಹವಾಲು ಸಲ್ಲಿಸಿದರು.
ತಾರ್ಕಿಕ ಅಂತ್ಯ ಕಾಣಬೇಕು ಸಮ್ಮೇಳನದಲ್ಲಿ ಒಂದು ದಿನ ಚರ್ಚೆ ನಡೆಸಿ, ಬಳಿಕ ಮೌನವಾಗಿದ್ದರೆ ಸಮ್ಮೇಳನ ಆಯೋಜಿಸಿ ಪ್ರಯೋಜನವಿಲ್ಲದಂತಾಗುತ್ತದೆ. ಸೋಮವಾರದಿಂದಲೇ ಇದರ ಫಾಲೋಅಪ್ ನಡೆಸಲಾಗುವುದು. ಮುಂದಿನ ಸಮ್ಮೇಳನ ನಡೆಸಬೇಕಿದ್ದರೆ, ಇವುಗಳಲ್ಲಿ ಕನಿಷ್ಠ 10 ಪ್ರಕರಣಗಳಾದರೂ ತಾರ್ಕಿಕ ಅಂತ್ಯ ಕಾಣಬೇಕು ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ಈ ಕಾಡು, ನೆಲ, ಜಲ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರ ನಾಗರಿಕರ ಮನಸಲ್ಲಿ ಬರಬೇಕು. ಹಾಗಿದ್ದರೆ ಮಾತ್ರ ಮುಂದಿನ ಪೀಳಿಗೆಗೆ ಪರಿಸರವನ್ನು ಕೊಡುಗೆಯಾಗಿ ನೀಡಲು ಸಾಧ್ಯ. ಹಿಂದೆ ಹೊಲಕ್ಕೆ ಹೋಗುವಾಗ ಬುತ್ತಿ ಕಟ್ಟಿಕೊಂಡು ಎಲೆಯಲ್ಲಿ ಹಾಕಿ ತಿನ್ನುತ್ತಿದ್ದೆವು. ಈಗ ಪ್ಲಾಸ್ಟಿಕ್ ತಿನ್ನುತ್ತಿದ್ದೇವೆ. ವೇದಿಕೆಯಲ್ಲಿ ಪರಿಸರದ ಜಾಗೃತಿ ಬಗ್ಗೆ ಮಾತನಾಡಿದರೆ ಸಾಲದು ಕೆಲಸದಲ್ಲೂ ತೋರಿಸಬೇಕು ಡಿಯಾಗೋ ಸಿದ್ದಿ, ಮುಖಂಡ, ಸಿದ್ದಿ ಜನಾಂಗ