

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರ ರಕ್ಷಣೆ ಮಾನವ ಕುಲಕ್ಕೆ ದೊಡ್ಡ ಸವಾಲಾಗಿದೆ. ನಾವು ಬದುಕಬೇಕಿದ್ದರೆ ಗಿಡ-ಮರ, ಪ್ರಾಣಿ ಪಕ್ಷಿಗಳು ಉಳಿಯಬೇಕು. ನಮ್ಮ ನೈಸರ್ಗಿಕ ಸಂಪತ್ತಿನ ರಕ್ಷಣೆ ಆಗಬೇಕು. ಪರಿಸರ ಉಳಿಸುವುದು ಬರೀ ಸರ್ಕಾರ, ಇಲಾಖೆಗಳ ಜವಾಬ್ದಾರಿ ಅಲ್ಲ. ಉಸಿರಾಡುವ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಪರಿಸರ ರಕ್ಷಣೆ ಮಾಡಬೇಕು ಎಂದು ಪರಿಸರವಾದಿ ಪಂಡಿತ್ ಮುಂಜಿ ಹೇಳಿದರು.
ವಿಶ್ವ ಪ್ರಕೃತಿ ಸಂರಕ್ಷಣಾ ದಿನ ನಿಮಿತ್ತ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಹಾಗೂ ಹಾಲಬಾವಿ ಸರ್ವದಾನ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಬೇಂದ್ರೆ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತ್ಯಾಜ್ಯ ಮುಕ್ತ ಪರಿಸರ ಗುಂಪು ಚರ್ಚಾ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿ ವೀರಶೈವ ಮಹಿಳಾ ಜಾಗೃತಿ ಸಮಿತಿ (ಪ್ರ), ಯೋಗ ಮಿತ್ರ ಮಂಡಳ (ದ್ವಿ ), ಸರಸ್ವತಿ ಜ್ಞಾನ ಮಂಡಳ (ತೃ) ಹಾಗೂ ರಾಣಿ ಚನ್ನಮ್ಮ ಮಂಡಳ, ಕಸ್ತೂರ ಬಾ ಮಂಡಳ ಸಮಾಧಾನಕರ ಬಹುಮಾನಗಳನ್ನು ಪಡೆದರು. ಸ್ಪರ್ಧೆ ತೀರ್ಪುಗಾರರಾಗಿ ಕೀರ್ತಿವತಿ, ಪದ್ಮಾವತಿ ತುಂಬಗಿ ಹಾಗೂ ಶಾಂತನಗೌಡ ಬಿರಾದಾರ ಭಾಗವಹಿಸಿದ್ದರು.
ಡಾ. ಪಾರ್ವತಿ ಹಾಲಬಾವಿ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಪಾಟೀಲ, ಅನಿತಾ ಹಿರೇಮಠ, ವೀಣಾ ಚಿಕ್ಕಮಠ, ಇತರರು ಇದ್ದರು. ಜಯಶ್ರೀ ಸ್ವಾಗತಿಸಿದರು. ಶೋಭಾ ದೇಶಪಾಂಡೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀದೇವಿ ಜಿ. ನಿರೂಪಿಸಿದರು.