

ಮಡಿಕೇರಿ: ಕಡಗದಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ ಶುಕ್ರವಾರ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಮಡಿಕೇರಿ ರೋಟರಿ, ಕಡಗದಾಳು ಸರ್ಕಾರಿ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಮರ ಗಿಡಗಳನ್ನು ಬೆಳೆಸಿ ಉತ್ತಮ ಪರಿಸರ ಕಾಣಬೇಕು ಎಂದು ಹೇಳಿದರು.
ಬಾಲ್ಯ ವಿವಾಹವು ಸಾಮಾಜಿಕ ಪಿಡುಗಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಕುಗ್ಗಿಸುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಡೆಗಣಿಸಿದಲ್ಲಿ ಸಮಾಜ ಅಧಃಪತನಕ್ಕೆ ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರನ್ನೂ ಗೌರವಿಸಬೇಕು. ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದು ಹೇಳಿದರು.
ಆಧುನಿಕತೆ ಬೆಳೆದಂತೆ ಅವಕಾಶಗಳು ಸಹ ವಿಫಲವಾಗಿವೆ. ಆ ನಿಟ್ಟಿನಲ್ಲಿ ವೃತ್ತಿ ಕೌಶಲ್ಯ ಬೆಳೆಸಿಕೊಂಡು ಲಭ್ಯವಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಾರ್ವಜನಿಕರಿಗೆ ಕಾನೂನಾತ್ಮಕವಾಗಿ ಒಳಿತು ಮಾಡುವ ನಿಟ್ಟಿನಲ್ಲಿ ಸ್ಪಂದಿಸಲಿದೆ ಎಂದರು.
ಮಡಿಕೇರಿ ರೋಟರಿ ಅಧ್ಯಕ್ಷ ಸುದೈ ನಾಣಯ್ಯ ಮಾತನಾಡಿ, ಹಿಂದೆ ಹಲವು ಕಾಡು ಹಣ್ಣುಗಳನ್ನು ನೋಡುತ್ತಿದ್ದೇವು. ಆದರೆ ಇಂದಿನ ಮಕ್ಕಳಿಗೆ ಕಾಡು ಹಣ್ಣುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಕಾಡು ಹಣ್ಣು ಸೇರಿದಂತೆ ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದರು.
ವಿವಿಧ ರೀತಿಯ ಹಣ್ಣಿನ ಗಿಡಗಳು ಹಾಗೂ ಮರಗಳನ್ನು ಬೆಳೆಯಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯವಾಗಲಿದೆ ಎಂದರು.
ಪ್ರಮುಖರಾದ ಕೆ.ಎಸ್.ತಮ್ಮಯ್ಯ ಅವರು ಮಾತನಾಡಿ ಜಲಸಿರಿ, ವನಸಿರಿ, ಆರೋಗ್ಯಸಿರಿ ಹಾಗೂ ವಿದ್ಯಾಸಿರಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಜೊತೆಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತಾಗಬೇಕು ಎಂದರು.
ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದಾಯಿನಿ ಭಾರತಿ, ಪ್ರಮುಖರಾದ ಸುರೇಶ್ ಚಂಗಪ್ಪ, ರೋಟರಿ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ, ಸದಸ್ಯರಾದ ಪಾರ್ವತಿ, ಮಲ್ಲಿಕಾ ಇತರರು ಇದ್ದರು.