

ನರೇಗಲ್ಲ: ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಇದರಿಂದ ಪರಿಸರದಲ್ಲಿ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಮಾರನಬಸರ ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಮ್ಮೂರ ನಮ್ಮ ಕೆರೆಯ 785ನೇ ಕೆರೆ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಅಶೀರ್ವಚನ ನೀಡಿದರು. ಕೆರೆ ಉಳಿದರೆ ಅಂತರ್ಜಲ ಹೆಚ್ಚುತ್ತದೆ. ಮರ ಗಿಡಗಳಿಂದ ಮಳೆಯಾಗುತ್ತದೆ. ಪ್ರತಿಯೊಂದು ಗ್ರಾಮದ ಜನರು ಸ್ವಇಚ್ಛೆಯಿಂದ ಕೆರೆ ಉಳಿಸುವ, ಮರ ಗಿಡಗಳನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದರು.
ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರ್ಕಾರದಿಂದಲೂ ಆಗಲಾರದಂತ ಕಾಮಗಾರಿಗಳನ್ನು ಕಲವೇ ಪ್ರಮಾಣದ ಅನುದಾನದಲ್ಲಿ ನಿಸ್ವಾರ್ಥವಾಗಿ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ ಎಂದರು.
ಶ್ರೀ ಷಡಕ್ಷರ ಬ್ರಹ್ಮ ಮಲ್ಲಿಕಾರ್ಜುನ ಶಿವಾಚಾರ್ಯರು, ಅಭಿನವ ಚನ್ನಬಸವ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ., ಜಿಲ್ಲಾ ನಿರ್ದೇಶಕ ಯೋಗೇಶ ಎ., ತಾಲೂಕು ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ, ಗ್ರಾಪಂ ಸದಸ್ಯ ಶಿವಕುಮಾರ ದಿಂಡೂರ, ಕೆರೆ ಸಮಿತಿ ಅಧ್ಯಕ್ಷ ಚಂದ್ರು ಮಾರನಬಸರಿ ಮಾತನಾಡಿದರು.
ಕೃಷಿ ಮೇಲ್ವಿಚಾರಕ ಶಂಭುಲಿಂಗ ವರದಿ ವಾಚಿಸಿದರು ಗ್ರಾಪಂ ಅಧ್ಯಕ್ಷ ವೀರಣ್ಣ ಮರಡಿ, ಶ್ರೀಕಾಂತ ಕುಲಕರ್ಣಿ, ಶ್ರೀಶೈಲಯ್ಯ ಶಾಂತಗಿರಿಮಠ, ಶಿವಶರಣಪ್ಪ ಹಾದಿಮನಿ, ಉಮೇಶ ಜಾಲಿಹಾಳ, ಕವಿತಾ ಒಣಗೇರಿ, ಲಲಿತಾ ಮಾರನಬಸರಿ, ವಲಯದ ಮೇಲ್ವಿಚಾರಕ ರಾಘವೇಂದ್ರ ಗುಡಿ ಹಾಗೂ ವಿಜಯಲಕ್ಷ್ಮಿ ಹಾದಿಮನಿ ಕಾರ್ಯಕ್ರಮ ನಿರ್ವಹಿಸಿದರು.