

ತೇರದಾಳ: ಪ್ರತಿ ಜೀವಿಗೆ ತಾಯಿಯೇ ಸರ್ವಶ್ರೇಷ್ಠ. ಕಲುಷಿತಗೊಳ್ಳುತ್ತಿರುವ ಇಂದಿನ ಪರಿಸರ ನಮ್ಮೆಲ್ಲರನ್ನು ಕಾಪಾಡುವ ತಾಯಿಯಾಗಬೇಕಾದರೆ ನಾವೆಲ್ಲರೂ ಮೊದಲು ತಾಯಿ ಹೆಸರಿನಿಂದ ಗಿಡನೆಟ್ಟು ಬೆಳೆಸಲು ಮುಂದಾಗಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಹಿಂದು ರುದ್ರಭೂಮಿಯಲ್ಲಿ ಬಿಜೆಪಿ ನಗರ ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಯಿ ಹೆಸರಿನಿಂದ ಒಂದು ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವನಿಂದ ಪರಿಸರವಲ್ಲ. ಪರಿಸರದಿಂದ ಮಾನವ. ಎಲ್ಲ ಜೀವಿಗಳ ಬದುಕಿನ ಅವಶ್ಯಕತೆಗಳು ಇಲ್ಲಿರುವುದರಿಂದ ಭೂಗ್ರಹದ ಮೇಲೆ ಮಾನವ ಸೇರಿ ಜೀವಿಗಳೆಲ್ಲ ಹುಟ್ಟಿ, ಬದುಕಲು ಸಾಧ್ಯವಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟಂತೆ ಎಲ್ಲರೂ ಗಿಡ-ಮರಗಳನ್ನು ನೆಟ್ಟು-ಬೆಳೆಸಿ ಪರಿಸರ ರಕ್ಷಣೆ ಮಾಡುವ ಪಣ ತೊಡೋಣ ಎಂದರು.
ಗಿಡ-ಮರಗಳನ್ನು ನಾಶ ಮಾಡಿ, ನೆರಳು, ಹಣ್ಣು-ಹಂಪಲು, ಶುದ್ಧ ಗಾಳಿ ಬಯಸಿದರೆ ಹೇಗೆ? ಪರಿಸರದಲ್ಲಿ ಸಮತೋಲನ ಇಲ್ಲವಾದರೆ ಹವಾಮಾನ, ಮಳೆ-ಬೆಳೆಗಳಲ್ಲಿ ತೀರ ಬದಲಾವಣೆಯಾಗಿ ಸಂಕಷ್ಟಕ್ಕೆ ಸಿಕ್ಕು ಹಾಕಿಕೊಳ್ಳುವುದು ಶತಸಿದ್ಧ. ಪರಿಸರವನ್ನು ನಾವು ರಕ್ಷಿಸಿದರೆ ಮಾತ್ರ ನಮ್ಮನ್ನು ಪರಿಸರ ರಕ್ಷಿಸಬಲ್ಲದು ಎಂಬ ಸದಾಸತ್ಯವನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದರು.
ಬಿಜೆಪಿ ಗ್ರಾಮ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ವಿಠ್ಠಲ ತಟ್ರಿ, ನಿಂಗಪ್ಪ ಮಾಲಗಾಂವಿ, ರಾಮಣ್ಣ ಹಿಡಕಲ್, ಅಪ್ಪು ಮಂಗಸೂಳಿ, ಸಚಿನ ಕೊಡತೆ, ಕಾಶಿನಾಥ ರಾಠೋಡ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಕೇದಾರಿ ಪಾಟೀಲ, ಸದಾಶಿವ ಹೊಸಮನಿ, ಮುರುಗೇಶ ಬಾಳಿಕಾಯಿ, ಪ್ರವೀಣ ತುಬಚಿ, ತಮ್ಮಣ್ಣಿ ನಾಗರೆಡ್ಡಿ, ನಿಂಗಪ್ಪ ನಿಲಜಗಿ, ಭೀಮು ಮಸೂತಿ, ಪ್ರಕಾಶ ಶೇಡಬಾಳ ಇದ್ದರು.