ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಪಿ.ಜಿ.ಆರ್.ಸಿಂಧ್ಯ

sout gaid
Published on

ಮಡಿಕೇರಿ: ಉತ್ತಮ ಪರಿಸರ ಸಂರಕ್ಷಣೆ ಹಾಗೂ ಜೀವ ಸಂಕುಲದ ಉಳಿವಿಗೆ ಬೇಕಾದ ಶುದ್ಧ ಆಮ್ಲಜನಕ ಒದಗಿಸಿ ಪರಿಸರ ಸಮತೋಲನ ಕಾಪಾಡಿಕೊಂಡು ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಹೇಳಿದರು.


ಮಡಿಕೇರಿ ತಾಲೂಕಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಮೂಲ ತರಬೇತಿ ಹಾಗೂ ಮುಂದುವರಿದ ತರಬೇತಿಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ಅರಣ್ಯ ಇಲಾಖೆಯ ಮಡಿಕೇರಿ ವಲಯ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ಸಂಭ್ರಮ ಕಾರ್ಯಕ್ರಮದಲ್ಲಿ ಶಾಲಾವರಣದಲ್ಲಿ ಅರಣ್ಯ ಸಸಿ ನೆಡುವ ಮೂಲಕ ವನ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಕೊಡಗಿನಲ್ಲಿ ಉತ್ತಮ ಮಳೆ ಬಿದ್ದು ಜೀವನದಿ ಕಾವೇರಿ ತುಂಬಿ ಹರಿದರೆ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ನಾಡಿನ ಜನತೆಯ ನೀರಿನ ಬವಣೆ ಸಾಧ್ಯ. ಈ ದಿಸೆಯಲ್ಲಿ ಉತ್ತಮ ಮಳೆ ಪಡೆಯುವ ಸಲುವಾಗಿ ನಾವು ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಕೊಡಗಿನ ಅರಣ್ಯ, ಪರಿಸರ ಹಾಗೂ ಕಾವೇರಿ ನದಿಯನ್ನು ಸಂರಕ್ಷಿಸುವ ಮೂಲಕ ಇಡೀ ಜೀವ ಸಂಕುಲವನ್ನು ಸಂರಕ್ಷಿಸಬೇಕಿದೆ. ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಅಸ್ತಿತ್ವದಲ್ಲಿರುವ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರೂ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತೊಡಗಬೇಕು ಎಂದು ಪಿ.ಜಿ.ಆರ್.ಸಿಂಧ್ಯ ಮನವಿ ಮಾಡಿದರು.


ವಿದ್ಯಾರ್ಥಿ ಸಮುದಾಯ ಹಾಗೂ ಯುವ ಜನಾಂಗಕ್ಕೆ ಅರಣ್ಯ ಮತ್ತು ಪರಿಸರದ ಉಳಿವು ಹಾಗೂ ಅದರ ಮಹತ್ವವನ್ನು ತಿಳಿಸುವ ಸಲುವಾಗಿ ಇಂತಹ ಪರಿಸರ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ ಎಂದರು.


ಪರಿಸರ ಜಾಗೃತಿ ಆಂದೋಲನದ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮತ್ತು ರಾಷ್ಟ್ರೀಯ ಹಸಿರು ಪಡೆಯ ಇಕೋ-ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮ ಕುಮಾರ್, ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿ ಹೆಚ್ಚು ಸಸಿನೆಟ್ಟು ಬೆಳೆಸುವ ಮೂಲಕ ನೆಲ-ಜಲ ಸಂರಕ್ಷಣೆ, ಜೀವಿ-ವೈವಿಧ್ಯ ಹಾಗೂ ನೀರಿನ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಸಂಘಟಿತ ಪ್ರಯತ್ನ ಅಗತ್ಯ. ಪಶ್ಚಿಮಘಟ್ಟ ಪ್ರದೇಶದಲ್ಲಿನ ಜೀವ ವೈವಿಧ್ಯ ಸೂಕ್ಷ್ಮ ತಾಣಗಳಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ವೈವಿಧ್ಯವಿದ್ದು, ಇವುಗಳ ಸಂರಕ್ಷಣೆಗೆ ಎಲ್ಲರೂ ಸಂಘಟಿತ ಪ್ರಯತ್ನ ಪಡಬೇಕು ಎಂದರು.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಘಟಕದ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.


ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲ ಪಂಕಜಾಕ್ಷನ್, ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆ ರಾಣಿ ಮಾಚಯ್ಯ, ಜಿಲ್ಲಾ ಸ್ಕೌಟ್ಸ್‌ನ ಆಯುಕ್ತ ಜಿಮ್ಮಿ ಸಿಕ್ವೇರಾ, ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸಂಸ್ಥೆಯ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ಸ್‌ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಮಡಿಕೇರಿ ವಲಯದ ಡಿಆರ್‌ಎಫ್‌ಓ ಸುನಿಲ್ ಗುನಗಾ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಇತರರು ಇದ್ದರು.


ಅರಣ್ಯ ಇಲಾಖೆಯ ಡಿಆರ್‌ಎಫ್‌ಓ ಸುನಿಲ್ ಗುನಗಾ, ಅರಣ್ಯ ವೀಕ್ಷಕರಾದ ವಾಸುದೇವ್, ಮಹೇಶ್, ರವಿ ಶಿಕ್ಷಕರೊಂದಿಗೆ ಜತೆಗೂಡಿ ೩೦ಕ್ಕೂ ನೆಡುವ ಕಾರ್ಯಕ್ರಮಕ್ಕೆ ಸಹಕರಿಸಿದರು.


ತರಬೇತಿ ನಿರತ ಶಿಕ್ಷಕರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ಘೋಷಣೆಗಳ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳನ್ನು ಕೂಗಿದರು. ಹಸಿರೇ ಉಸಿರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪಶ್ಚಿಮಘಟ್ಟಗಳ ಸಂರಕ್ಷಣೆ ಎಲ್ಲರ ಹೊಣೆ, ಬೈಸಿಕಲ್ ಬಳಸಿ ಮಾಲಿನ್ಯ ತಡೆಯಿರಿ, ಜೀವನದಿ ಕಾವೇರಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net