ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ

bhr 1 (3)
Published on

ಬಾಳೆಹೊನ್ನೂರು: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಎಸ್‌ಐ ರವೀಶ್ ಹೇಳಿದರು.

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಪರಿಸರವಿದ್ದರೆ ಮಾತ್ರ ನಮಗೆ ಉತ್ತಮ ಆರೋಗ್ಯ ದೊರೆಯಲು ಸಾಧ್ಯವಿದೆ. ಪರಿಸರವಿಲ್ಲದಿದ್ದರೆ ಭೂಮಿಯಲ್ಲಿ ಅಸಮತೋಲನ ಉಂಟಾಗಿ ಹತ್ತಾರು ಸಮಸ್ಯೆಗಳು ಉದ್ಭವಿಸಲಿದೆ. ಈ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಕನಿಷ್ಟ ಒಂದು ಗಿಡ ನೆಡಬೇಕು ಎಂದರು.

ಅರಣ್ಯ ನಾಶದಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಊರಿಗೊಂದು ಶಾಲೆ ಮನೆಗೊಂದು ಮರ ನೆಡಬೇಕಾದ ಸದುದ್ದೇಶ ಎಲ್ಲರಲ್ಲೂ ಬರಬೇಕು. ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಉಂಟು ಮಾಡುವ ಅವಶ್ಯಕತೆಯಿದೆ. ಪರಿಸರಕ್ಕೆ ಮಾರಕವಾದ ರಾಸಾಯನಿಕ ಗೊಬ್ಬರದ ಬದಲಾಗಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಭೂಮಿಯ ಶಕ್ತಿ ಸರಿಯಾಗಿರಲು ಸಾಧ್ಯವಾಗುತ್ತದೆ ಎಂದರು.

ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಮಾನವನ ಅತಿಯಾದ ದುರಾಸೆಯಿಂದಾಗಿ ಪ್ರಕೃತಿ ನಾಶವಾಗಿ ಭೂಮಿಯಲ್ಲಿ ಅಸಮತೋಲನ ಉಂಟಾಗಿದೆ. ಮನುಷ್ಯರು ತಮ್ಮ ಅಂತ್ಯವಿಲ್ಲದ ಆಸೆ, ಆಕಾಂಕ್ಷೆಗಳಿಗಾಗಿ ಪರಿಸರವನ್ನು ಬಲಿ ಕೊಡುತ್ತಿದ್ದಾರೆ.ಇದರಿಂದಾಗಿ ಇಂದು ಹಲವೆಡೆ ಭೂ ಕುಸಿತ, ನೀರಿಗೆ ಹಾಹಾಕಾರ, ಆಹಾರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿವೆ ಎಂದರು.

ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮುಂದಿನ ಜನಾಂಗಕ್ಕೆ ಭೂಮಿ, ನೀರು, ಮಣ್ಣಿನ ರಕ್ಷಣೆ ನೀಡಿ ಅವರಿಗೆ ಹಸ್ತಾಂತರಿಸಬೇಕಾದ ಮಹತ್ತರವಾದ ಕರ್ತವ್ಯ ನಮ್ಮ ಮೇಲಿದೆ ಎಂದರು.

ಜೇಸಿಐ ಪೂರ್ವಾಧ್ಯಕ್ಷ ಸುಧಾಕರ್, ರಿಚರ್ಡ್ ಮಥಾಯಿಸ್, ಸದಸ್ಯರಾದ ಕಿಶೋರ್, ಚೇತನ್‌ಕುಮಾರ್, ಶಾಹಿದ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net