ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

11 ckm 2 (1)
ಚಿಕ್ಕಮಗಳೂರಲ್ಲಿ ಅಣುವ್ರತ್ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬ್ರಹ್ಮ ಕುಮಾರಿ ಭಾಗ್ಯಲಕ್ಷ್ಮೀ, ಮಂಜುಳಾಬನ್ಸಾಲಿ, ಕಾಂತಿಲಾಲ್ ಜೈನ್, ಚೈತ್ರಾ ಎಸ್ ಗೌಡ, ಮಂಜುನಾಥ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಾಗರಿಕರು ಮತ್ತು ಮಕ್ಕಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸುತ್ತಮುತ್ತಲು ಪರಿಸರಕ್ಕೆ ಪೂರಕವಾಗಿರುವ ಸಸಿಗಳನ್ನು ಬೆಳೆಸುವ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಬ್ರಹ್ಮ ಕುಮಾರಿ ಭಾಗ್ಯಲಕ್ಷ್ಮೀ ಹೇಳಿದರು.
ನಗರದ ಫ್ರೈಡ್ ಯುರೋ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಅಣುವ್ರತ್ ಸಮಿತಿಯಿಂದ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಮುಂದಿನ ಜನಾಂಗದ ಶ್ರೇಯೋಭಿವೃದ್ಧಿಗೆ ಪರಿಸರ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಾಗರಿಕರು ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹೆಮ್ಮರವಾಗಿ ಬೆಳೆಸಿದರೆ ಶುದ್ಧ ಗಾಳಿ ಹಾಗೂ ನೆರಳಿನ ಆಸರೆ ಸಿಕ್ಕಂತಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಇಂದಿನಿಂದಲೇ ಈ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಅಣುವ್ರತ್ ಸಮಿತಿ ಸದಸ್ಯ ಮಂಜುಳಾ ಬನ್ಸಾಲಿ ಮಾತನಾಡಿ, 1974ರಲ್ಲಿ ವಿಶ್ವ ಪರಿಸರ ದಿನಾಚರಣೆ ಆರಂಭವಾಗಿ ಇಂದಿನವರೆಗೂ ಆಚರಿಸಲಾಗುತ್ತಿದೆ. ಪರಿಸರ ದಿನಾಚರಣೆಯ ಮೂಲ ಉದ್ದೇಶವೆಂದರೆ ಮಾಲಿನ್ಯ ತಡೆಗಟ್ಟಿ ಸಮಾಜದಲ್ಲಿ ಸ್ವಚ್ಛಂದ ಪರಿಸರವನ್ನು ಉಳಿಸುವುದಾಗಿದೆ ಎಂದರು.
ಮನುಷ್ಯ ಕುಲ, ಪ್ರಾಣಿ ಕುಲ ನೆಮ್ಮದಿಯ ಜೀವನವನ್ನು ನಡೆಸಬೇಕಾದರೆ ವನಗಳ ಸಂರಕ್ಷಣೆ ಅಗತ್ಯ. ಭಾರತ ಸರ್ಕಾರ ಸಹ ಗಿಡಮರಗಳನ್ನು ಬೆಳೆಸುವಲ್ಲಿ ಶ್ರಮಿಸುತ್ತಿದೆ. ಅಣುವ್ರತ ಸಂಸ್ಥೆ ಉದ್ದೇಶ ಸಹ ಪರ್ಯಾವರಣ, ಮೈತ್ರಿ, ನಶೆಮುಕ್ತಿ, ಅಹಿಂಸೆ ಮತ್ತು ಸದ್ಭಾವನೆಯ ಚೇತನವನ್ನು ಜಾಗೃತಗೊಳಿಸುವುದಾಗಿದೆ ಎಂದು ಹೇಳಿದರು.
ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್ ಮಾತನಾಡಿ, ಪರಿಸದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಅಣುವ್ರತ್ ಸಮಿತಿ ಮುಂದಿನ ಯುವ ಪೀಳಿಗೆಗೆ ಒಳ್ಳೆಯ ವಾತಾವರಣದ ಜತೆಗೆ ಪರಿಶುದ್ದ ಗಾಳಿ ಸಿಗಬೇಕು ಎಂಬ ಉದ್ದೇಶದಿಂದ ಪರಿಸದ ಬಗ್ಗೆ ಕಾಳಜಿ ವಹಿಸುತ್ತಿದೆ. ಇದೇ ರೀತಿಯಲ್ಲಿ ಎಲ್ಲರೂ ಕಾಳಜಿವಹಿಸಿ ಗಿಡಮರಗಳನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಚೈತ್ರ.ಎಸ್.ಗೌಡ ಮಾತನಾಡಿ, ಅಣುವ್ರತ್ ಸಮಿತಿ ಪರಿಸರ ದಿನಾಚಾರಣೆ ಅಂಗವಾಗಿ 5 ಸಾವಿರ ಸಸಿಗಳನ್ನು ಯಶಸ್ವಿಯಾಗಿ ನೆಡುವ ಮೂಲಕ ಅಭಿಯಾನ ಪ್ರಾರಂಭ ಮಾಡಿದ್ದಾರೆ ಎಂದರು.
ಶಾಲೆ ಪ್ರಾಚಾರ್ಯ ಮಂಜುನಾಥ್, ಅಣುವ್ರತ್ ಸಮಿತಿ ಕಾರ್ಯದರ್ಶಿ ಗೌತಮ್ ಆಚಾ, ಸಭಾಧ್ಯಕ್ಷ ಮಹೇಂದ್ರ ದೋಸಿ, ಕಿಶೋರ್, ಮಾಜಿ ಅಧ್ಯಕ್ಷ ಲಾಲ್‌ಚಂದ್ ಬನ್ಸಾಲ್, ಸುರೇಂದ್ರ, ಸುರೇಶ್ ಆಚಾ, ಸಜ್ಜನ್‌ರಾಜ್, ಫಿರ್ಗಲ್, ಮಧನ್‌ಚಂದ್ ಗಾಧಿಯಾ, ಗುಣವತಿ, ಚಂದ್ರಬಾಯಿ, ಫ್ಯಾನ್ಸಿ ಆಚಾ, ಕೌಶಲ್ಯ ಬಾಯಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net