

ಮಂಗಳೂರು: ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ನಮ್ಮ ಅತ್ಯಂತ ಮುಖ್ಯ ಜವಾಬ್ದಾರಿಗಳಲ್ಲೊಂದು. ನೈಸರ್ಗಿಕ ಪರಿಸರವನ್ನು ನಾವು ರಕ್ಷಿಸದೇ ಹೋದರೆ ಭೂಮಿತಾಯಿಗೆ ದ್ರೋಹವೆಸಗಿದಂತಾಗುತ್ತದೆ. ಶಿಕ್ಷಣದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳು ಕಲಿಯಬೇಕಾಗಿದೆ ಎಂದು ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆ ಪ್ರಾಂಶುಪಾಲ ಬಿಂದುಸಾರ ಶೆಟ್ಟಿ ಹೇಳಿದರು.
ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ನಡೆದ ವಿಶ್ವ ಪರಿಸರ ದಿನಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಜಗತ್ತಿನ ಅತಿವೇಗದ ಬೆಳವಣಿಗೆಯಲ್ಲಿ, ನಾವು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಪರಿಸರಕ್ಕೆ ಅಭಿವೃದ್ಧಿಯೇ ಮಾರಕವೆನಿಸುವ ಮಟ್ಟಕ್ಕೆ ಜಾಗತಿಕವಾಗಿ ಮಾಲಿನ್ಯಸಮಸ್ಯೆ ಎದುರಾಗಿದೆ. ಹಲವಾರು ಪ್ರಭೇದಗಳ ಪ್ರಾಣಿಪಕ್ಷಿ ಮತ್ತು ಸಸ್ಯ ಸಂಪತ್ತು ವಿನಾಶದ ಅಂಚಿನಲ್ಲಿವೆ. ನೈಸರ್ಗಿಕ ಸಮತೋಲನ ಕಾಪಾಡದೇ ಇದ್ದಲ್ಲಿ, ಮುಂದೊಂದು ದಿನ ಭೂಮಿ ಅತಿದೊಡ್ಡ ನೈಸರ್ಗಿಕ ದುರಂತವನ್ನೆದುರಿಸಬೇಕಾಗುತ್ತದೆ. ಭೂಮಿಯ ದುರುಪಯೋಗವನ್ನು ತಡೆಯಲು ಪರಿಸರಕ್ಕೆ ಮಲಿನಕಾರಕ ರಾಸಾಯನಿಕ ಪದಾರ್ಥಗಳು, ಧೂಳು, ಕಟ್ಟಡಗಳ ನಿರ್ಮಾಣ, ಮರಗಳ ನಾಶ ಕಡಿಮೆಯಾಗಬೇಕು ಮತ್ತು ಶುದ್ಧ ಗಾಳಿಗಾಗಿ ಅನೇಕ ಗಿಡಗಳನ್ನು ನೆಡಬೇಕು ಎಂದರು.
ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆ ಸಹಯೋಗದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಗಿಡವನ್ನು ಹಸ್ತಾಂತರಿಸಲಾಯಿತು. ಮಕ್ಕಳು ಶಾಲಾ ಆವರಣದಲ್ಲಿ ಹೆತ್ತವರ ಜೊತೆಗೆ ಗಿಡವನ್ನು ನೆಟ್ಟು ಆ ಗಿಡಕ್ಕೆ ತಮ್ಮ ಹೆತ್ತವರ ಹೆಸರನ್ನು ಇಟ್ಟರು ಮತ್ತು ಪರಿಸರವನ್ನು ಉಳಿಸುವ ಪ್ರತಿಜ್ಞೆ ಮಾಡಿದರು.
ಸಂಸ್ಥೆಯ ಎಓ ಮುರುಳಿಧರ್ ರಾವ್, ಉಪ ಪ್ರಾಂಶುಪಾಲೆ ಪವಿತ್ರ, ಸಹ ಮುಖ್ಯ ಶಿಕ್ಷಕಿ ಸೌಜನ್ಯ ಎಲ್ಲಾ ಶಿಕ್ಷಕ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕಿ ವಿದ್ಯಾ ನಿರೂಪಿಸಿದರು, ಶಿಕ್ಷಕಿ ಸ್ನೇಹ ಸ್ವಾಗತಿಸಿದರು, ಕವಿತ ವಂದಿಸಿದರು.
-------------
ವಿದ್ಯಾರ್ಥಿಗಳು ಪರಿಸರ ಸಂರಕ್ಷಿಸಲು ಬೇಕಾದ ಜ್ಞಾನವನ್ನು ಶಿಕ್ಷಣದ ಜತೆಗೆ ಕರಗತಮಾಡಿಕೊಳ್ಳುವುದು ಅಗತ್ಯ. ಶುದ್ಧ ಗಾಳಿ, ಬೆಳಕು, ಮಣ್ಣು, ನೀರು ಮನುಷ್ಯನ ಆರೋಗ್ಯ ಕೆಡದಂತೆ ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಸಹಕಾರವಾಗುತ್ತದೆ.
-ಬಿಂದುಸಾರ ಶೆಟ್ಟಿ, ಪ್ರಾಂಶುಪಾಲರು,
ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆ