

ಜಗದೀಶ ಹೊಂಬಳಿ ಬೆಳಗಾವಿ
ದಿನದಿಂದ ದಿನಕ್ಕೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಪಾರಾಗಲು ಜನರು ಇದೀಗ ಇಲೆಕ್ಟಿಕಲ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಶಿಕ್ಷಣ ಸಂಸ್ಥೆ (ಜಿಐಟಿ) ಇಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಿಸಲು ಸಂಸ್ಥೆ ಇಲೆಕ್ಟ್ರಿಕಲ್ ವಾಹನ ಚಾರ್ಜ್ ಮಾಡುವುದಕ್ಕೆ ‘ಚಾರ್ಜಿಂಗ್ ಸ್ಟೇಶನ್’ ನಿರ್ಮಿಸಿದ್ದು, ಇದಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದು ಎಲ್ಲರ ಮೆಚ್ಚಿಗೆಗೂ ಪಾತ್ರವಾಗಿದೆ.
ಕಾಲೇಜಿನ ಡಿಪಾರ್ಟ್‌ಮೆಂಟ್ ಆಫ್ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಿಂದ ಚಾರ್ಚಿಂಗ್ ಸ್ಟೇಶನ್ ನಿರ್ಮಿಸಲಾಗಿದ್ದು, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಇಲೆಕ್ಟ್ರಿಕಲ್ ಬೈಕ್ ಹಾಗೂ ಕಾರ್‌ಗಳನ್ನು ಚಾರ್ಜ್ ಮಾಡಲಾಗುತ್ತಿದೆ.ಈ ಸ್ಟೇಶನ್‌ಗೆ ಸೋಲಾರ್ ವ್ಯವಸ್ಥೆ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಇಲೆಕ್ಟ್ರಿಕಲ್ ವಾಹನಗಳಿಗೆ ಪ್ರೋತ್ಸಾಹ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಜತೆಗೆ ಇಂಧನ ಉಳಿತಾಯಕ್ಕೆ ಸಂಸ್ಥೆ ಕೈ ಜೋಡಿಸುತ್ತಿದೆ. ಅಲ್ಲದೇ ಕಾಲೇಜಿನಲ್ಲಿ ಸ್ಥಾಪಿಸಿರುವ ಪವರ್ ಗ್ರೀಡ್‌ಗೆ ಸೋಲಾರ್ ಹಾಗೂ ಹೆಸ್ಕಾಂನಿಂದಲೂ ವಿದ್ಯುತ್ ಪೂರೈಕೆ ಮಾಡಲಾಗಿದೆ. ಸೋಲಾರ್ ಮೂಲಕ ಕಾಲೇಜಿನ ಪವರ್ ಗ್ರೀಡ್‌ನಲ್ಲಿ ವಿದ್ಯುತ್ ಸಂಗ್ರಹಿಸಲಾಗುತ್ತಿದೆ. ಹೆಸ್ಕಾಂನಿಂದಲೂ ವಿದ್ಯುತ್ ಸರಬರಾಜು ಆಗುವ ವ್ಯವಸ್ಥೆ ಗ್ರೀಡ್‌ಗೆ ಕಲ್ಪಿಸಲಾಗಿದೆ. ಸೋಲಾರ್‌ನ ವಿದ್ಯುತ್ ಸಾಕಾಗದಿದ್ದರೆ ಹೆಸ್ಕಾಂನ ವಿದ್ಯುತ್ ಬಳಸಿಕೊಳ್ಳುವ ವ್ಯವಸ್ಥೆಯನ್ನು ಕಾಲೇಜು ಮಾಡಿಕೊಂಡಿದೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸೋಲಾರ್ ವ್ಯವಸ್ಥೆ ಮೂಲಕ ಇಲೆಕ್ಟ್ರಿಕಲ್ ವಾಹನಗಳನ್ನು ಚಾರ್ಜಿಂಗ್ ಮಾಡುತ್ತಿರುವ ಗೋಗಟೆ ತಾಂತ್ರಿಕ ಶಿಕ್ಷಣ ಸಂಸ್ಥೆ ಕರ್ನಾಟಕದಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಇತರ ಸಂಸ್ಥೆಗಳಿಗೂ ಮಾದರಿಯಾಗಿ ಪರಿಸರ ಕಾಳಜಿ ಮೆರೆಯುತ್ತಿದೆ.
ಕಾಲೇಜಿನ 45 ವಿದ್ಯಾರ್ಥಿಗಳು ಇಲೆಕ್ಟ್ರಿಕಲ್ ಬೈಕ್‌ಗಳನ್ನು ಹೊಂದಿದ್ದಾರೆ. ಮೂವರು ಸಿಬ್ಬಂದಿ ಇಲೆಕ್ಟ್ರಿಕಲ್ ಕಾರ್ ಖರೀದಿಸಿದ್ದಾರೆ. ಇವರ ವಾಹನಗಳಿಗೆ ಕಾಲೇಜಿನಲ್ಲಿ ಶುಲ್ಕ ರಹಿತವಾಗಿ ಚಾರ್ಜಿಂಗ್ ಮಾಡಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಸೋಲಾರ್ ಮೂಲಕವೇ ಸಂಸ್ಥೆಗೂ ಅಗತ್ಯವಿರುವ ವಿದ್ಯುತ್‌ನ್ನು ಸಂಗ್ರಹಿಸಲಾಗುತ್ತಿದೆ.
ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟಲು ಬ್ಯಾಟರಿ ಚಾಲಿತ ಇಲೆಕ್ಟ್ರಿಕಲ್ ವಾಹನಗಳ ಬಳಕೆ ಉತ್ತೇಜಿಸಲು ಕೆಎಲ್‌ಎಸ್ ಜಿಐಟಿ ಬದ್ಧವಾಗಿದೆ. ಸಾಮಾಜಿಕ ಕಳಕಳಿ, ಪರಿಸರ ಸಂರಕ್ಷಣೆ ಇಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಈ ದೃಷ್ಟಿಯಿಂದ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಿದ್ದೇವೆ. ಇದಕ್ಕೆ ಸೋಲಾರ್‌ನಿಂದಲೂ ಪವರ್ ಸಪ್ಲಾಯ್ ಮಾಡಿಕೊಂಡಿದ್ದೇವೆ. ಎಂ.ಎಸ್. ಪಾಟೀಲ, ಪ್ರಾಚಾರ್ಯರು, ಕೆಎಲ್‌ಎಸ್ ಜಿಐಜಿ ಬೆಳಗಾವಿ