

ಬಾಳೆಹೊನ್ನೂರು: ಎಲೆಕ್ಟ್ರಾನಿಕ್ ಉಪಕರಣಗಳ ಇ-ತ್ಯಾಜ್ಯದಿಂದ ಪರಿಸರ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಹೇಳಿದರು.
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್‌ನಿಂದ ಶುಕ್ರವಾರ ಆಯೋಜಿಸಿದ್ದ ಇ-ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿ ವರ್ಷ ಇ-ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ. ಇ-ತ್ಯಾಜ್ಯ ಅವೈಜ್ಞಾನಿಕ ಸಂಸ್ಕರಣೆಯಿಂದ ವಿಷಕಾರಿ ವಸ್ತುಗಳು ಪರಿಸರಕ್ಕೆ ಸೇರಿ ಅನೇಕ ಅಪಾಯಗಳನ್ನು ಉಂಟು ಮಾಡುತ್ತಿದೆ. ಸೀಸ, ಪಾದರಸ, ಆರ್ಸೆನಿಕ್ ಮತ್ತು ಕ್ಯಾಡ್ಮಿಯಂನಂಥ ವಿಷಕಾರಿ ವಸ್ತುಗಳು ಪರಿಸರವನ್ನು ಹಾಳುಮಾಡುತ್ತಿವೆ. ಆದ್ದರಿಂದ ಇ-ತ್ಯಾಜ್ಯ ಸೂಕ್ತ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಎಲೆಕ್ಟ್ರಾನಿಕ್ ವಸ್ತುಗಳ ಮಿತ ಬಳಕೆ, ದೀರ್ಘಕಾಲ ಬಳಕೆ, ಮರುಬಳಕೆ ಮತ್ತು ಹಸ್ತಾಂತರದಿಂದ ಇ-ತ್ಯಾಜ್ಯದ ದುಷ್ಪರಿಣಾಮ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕರೇ ಕಡ್ಡಾಯವಾಗಿ ಇ-ತ್ಯಾಜ್ಯ ಸಂಗ್ರಹ ಘಟಕಗಳನ್ನು ಆರಂಭಿಸಿ ಗ್ರಾಹಕರಿಗೆ ಅದರ ಮಾಹಿತಿ ನೀಡಬೇಕು. ಆಗ ಇ-ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರಲಿದೆ ಎಂದರು.
ಪಟ್ಟಣದ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮಾಹಿತಿ ಕಾರ್ಯಾಗಾರ ನಡೆಸಿ, ಇ-ತ್ಯಾಜ್ಯ ನಿರ್ವಹಣೆಗೆ ಡ್ರಮ್‌ಗಳನ್ನು ವಿತರಿಸಲಾಯಿತು.
ಪ್ರಾಚಾರ್ಯರಾದ ಬಿ.ಎಚ್.ಕೃಷ್ಣಮೂರ್ತಿ, ಕೆ.ಆರ್.ಬೂದೇಶ್, ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ರೋಟರಿ ಸದಸ್ಯರಾದ ಕೆ.ಟಿ.ವೆಂಕಟೇಶ, ಸಿ.ಪಿ.ರಮೇಶ್, ವೆಂಕಟೇಶ ಭಟ್, ಯಶವಂತ, ಸಾಗರ್ ಇತರರಿದ್ದರು.