

ಕುರುಗೋಡು; ಹೆಚ್ಚುತ್ತಿರುವ ಪ್ರಕೃತಿ ವಿಕೋಪ ತಪ್ಪಿಸಲು ಪ್ರತಿಯೊಬ್ಬರೂ ಮರ ಬೆಳೆಸುವ ಜತೆಗೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಹರ್ಷವರ್ಧನ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ, ಕೌಶಲಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ಪುರಸಭೆ ಆಡಳಿತ ಸಹಯೋಗದಲ್ಲಿ ಅಮೃತ ಮಿತ್ರ ಮರಗಳ ರಕ್ಷಣೆ ಕಾರ್ಯಕ್ರಮದಡಿ ಮಹಿಳೆಯರಿಗೆ ಕಿಟ್ ವಿತರಿಸಿ ಇತ್ತೀಚಿಗೆ ಮಾತನಾಡಿದರು.
ಪರಿಸರದ ಅಸಮತೋಲನದಿಂದ ಸಮರ್ಪಕ ಮಳೆ, ಬೆಳೆ ಇಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಪರಿಸರ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕೆರೆ, ಮನೆ, ಖಾಲಿ ಸ್ಥಳ, ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಗಿಡ ನೆಟ್ಟು ಪೋಷಿಸಬೇಕು ಎಂದರು.
ಸ್ವಸಹಾಯ ಗುಂಪಿನ ಸದಸ್ಯೆಯರಿಗೆ ಪುರಸಭೆಯಿಂದ ಪ್ರೋತ್ಸಾಹ ಕಿಟ್ ವಿತರಿಸಲಾಯಿತು. ನಂತರ ಸ್ವಸಹಾಯ ಸಂಘದ ಮಹಿಳೆಯರು ಒಂದೊಂದು ಗಿಡ ನೆಟ್ಟು ದತ್ತು ಪಡೆದರು. ಸಮುದಾಯ ಸಂಘಟನಾ ಅಧಿಕಾರಿ ಪ್ರೇಮ್ ಚಾಲ್ಸ್, ಪುರಸಭೆ ಸದಸ್ಯ ನಾಗಭೂಷಣ, ಪ್ರಮುಖರಾದ ಮಂಜು, ನಟರಾಜ, ಗುರುಮೂರ್ತಿ, ಅಂಜಿನಿ, ಸುಂಕಪ್ಪ, ನಾಗರಾಜ ಇತರರಿದ್ದರು.