

</ಹುಬ್ಬಳ್ಳಿ : ನಗರದ ಗ್ರೀನ್ ಕರ್ನಾಟಕ ಅಸೋಸಿಯೇಷನ್ ವತಿಯಿಂದ ಜೂ. 8ರಂದು ಬೆಳಗ್ಗೆ 6.30 ಕ್ಕೆ ‘ರನ್ ಫಾರ್ ನೇಚರ್ 3.0’ ಪರಿಸರ ಸಂರಕ್ಷಣಾ ಜಾಗೃತಿ ಓಟ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಸೋಸಿಯೇಷನ್ ಅಧ್ಯಕ್ಷ ಚನ್ನು ಪಾಟೀಲ, ‘ಮನೆಗೊಂದು ಮಾವಿನ ಮರ’ ಘೋಷವಾಕ್ಯದಡಿ ಈ ಬಾರಿ ಜಾಗೃತಿ ಓಟ ಆಯೋಜಿಸಲಾಗಿದೆ. ಓಟದಲ್ಲಿ ಪಾಲ್ಗೊಂಡ ಹೆಸರು ನೋಂದಾಯಿಸದವರಿಗೆ ಮಾವಿನ ಹಣ್ಣಿನ ಸಸಿ ನೀಡಲಾಗುವುದು ಎಂದರು.
ವಿ.ಕೆ. ಫೌಂಡೇಷನ್ ಹಾಗೂ ವಸುಂಧರಾ ಫೌಂಡೇಷನ್ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿಯವರೆಗೆ 60 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 5.45ಕ್ಕೆ ತೋಳನಕೆರೆ ಬಳಿ ಅಗ್ನಿಹೋತ್ರ ಕಾರ್ಯಕ್ರಮ ನಡೆಯಲಿದೆ. ಹೆಸರು ನೋಂದಣಿ ನಂತರ ಬೆಳಗ್ಗೆ 7 ಗಂಟೆಗೆ ಓಟ ಪ್ರಾರಂಭಗೊಳ್ಳಲಿದೆ. 3 ಕಿಮೀ ಹಾಗೂ 5 ಕಿಮೀ ಪ್ರತ್ಯೇಕ ಓಟ ಇರಲಿದೆ. ವೇದಿಕೆ ಕಾರ್ಯಕ್ರಮಕ್ಕೆ ಪರಿಸರಪ್ರೇಮಿ ಶಿವಾನಂದ ಕಳವೆ ಹಾಗೂ ರೈತ ಮಹಿಳೆ ಕವಿತಾ ಮಿಶ್ರಾ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ ಎಂದರು.
ಜಾಗೃತಿ ಓಟಕ್ಕಾಗಿ 10 ಸಾವಿರ ಮಾವಿನ ಸಸಿಗಳನ್ನು ತರಲಾಗಿದೆ. ಓಟದಲ್ಲಿ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೂ ಒಂದೊಂದು ಮಾವಿನ ಸಸಿ ನೀಡಿದ ನಂತರ ಉಳಿದ ಏಳೂವರೆ ಸಾವಿರ ಸಸಿಗಳನ್ನು ಮುಂದಿನ ಆರು ತಿಂಗಳಲ್ಲಿ ಪ್ರತಿ ಮನೆ ಮುಂದೆ ನೆಡಲು ನಾಗರಿಕರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ವ್ಹೀ ಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವಸುಂಧರ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ಮೂರುಸಾವಿರಪ್ಪ ಮೆಣಸಿನಕಾಯಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.