ಚಾಮುಂಡಿಬೆಟ್ಟದಲ್ಲಿ 14 ವರ್ಷಗಳ ಬಳಿಕ ಪರಿಸರ ಮಾಹಿತಿ ಕೇಂದ್ರ ಕಾರ್ಯಾರಂಭ

Environmental Information Center inaugurated after 14 years at Chamundi Hills
Published on

ಮೈಸೂರು: ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವೃಕ್ಷೋದ್ಯಾನ ಯೋಜನೆಯಡಿ ಚಾಮುಂಡಿ ವನದಲ್ಲಿ ನಿರ್ಮಿಸಿದ ನವೀಕೃತ ಪರಿಸರ ಮಾಹಿತಿ ಕೇಂದ್ರ 14 ವರ್ಷಗಳ ನಂತರ ಬುಧವಾರದಿಂದ ಕಾರ್ಯಾರಂಭಗೊಂಡಿದೆ.

ಚಾಮುಂಡಿ ವನ ಹಾಗೂ ಮಾಹಿತಿ ಕೇಂದ್ರವನ್ನು 3-7-2003ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಭೂ ವಿವಾದದಿಂದ ಮಾಹಿತಿ ಕೇಂದ್ರವನ್ನು ಅರಣ್ಯ ಇಲಾಖೆ 2011ರಲ್ಲಿ ಮುಚ್ಚಿತ್ತು. ಸ್ಥಳೀಯರು ಜಾಗದ ಹಕ್ಕಿನ ವಿಚಾರವಾಗಿ ಅರಣ್ಯ ಇಲಾಖೆ ವಿರುದ್ಧ ದಾವೆ ಹೂಡಿದ್ದರು. ಹೈಕೋರ್ಟ್‌ನಲ್ಲಿ ಅರಣ್ಯ ಇಲಾಖೆಯ ಪರವಾಗಿ ತೀರ್ಪು ಬಂದ ನಂತರ ಅರಣ್ಯ ಇಲಾಖೆಯು ಪರಿಸರ ಮಾಹಿತಿ ಕೇಂದ್ರವನ್ನು ಅಭಿವೃದ್ಧಿ ಪಡಿಸಿದೆ.

ಉದ್ದೇಶವೇನು?: ಪರಿಸರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅರಣ್ಯ ಇಲಾಖೆಯ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವುದು ಕೇಂದ್ರದ ಉದ್ದೇಶವಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ರಿಯಾಯಿತಿ ದರದಲ್ಲಿ ಸಸಿಗಳ ವಿತರಣೆ, ಮಾನವ- ವನ್ಯ ಜೀವಿ ಸಂಘರ್ಷ ನಿಯಂತ್ರಣ, ಶ್ರೀಗಂಧ ಕೃಷಿ, ಅರಣ್ಯ ಹುತಾತ್ಮರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಹೊಂದಿದೆ. ಬೆಟ್ಟಕ್ಕೆ ಬರುವ ಭಕ್ತರೊಂದಿಗೆ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಇರುವ ಅರಣ್ಯ ಇಲಾಖೆಯ ಜಾಗದಲ್ಲಿ ನವೀಕೃತ ಪರಿಸರ ಮಾಹಿತಿ ಕೇಂದ್ರ ಇದೆ.

ಸಚಿವ ಮಹದೇವಪ್ಪ ಉದ್ಘಾಟನೆ

ಚಾಮುಂಡಿಬೆಟ್ಟದಲ್ಲಿ ಚಾಮುಂಡಿ ವನ ಹಾಗೂ ಪರಿಸರ ಮಾಹಿತಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಕೇಂದ್ರದ ಮೂಲಕ ಮಾಡಲಾಗುವುದು. ಚಾಮುಂಡಿವನವನ್ನು ವೃಕ್ಷೋದ್ಯಾನವನ್ನಾಗಿ ಅಭಿವೃದ್ದಿ ಪಡಿಸಲಾಗುವುದು. ಜತೆಗೆ ಮಕ್ಕಳ ಉದ್ಯಾನ, ಪವಿತ್ರವನ ನಕ್ಷತ್ರವನ, ರಾಶಿವನ ಮುಂತಾದ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.

ಚಾಮುಂಡಿಬೆಟ್ಟ ಪ್ರದೇಶ ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ವಾಹನಗಳ ವೇಗ ಮಿತಿಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗುವುದು. ಆಷಾಢ ಶುಕ್ರವಾರ ಸಂಬಂಧ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು. ಶೀಘ್ರದಲ್ಲಿಯೇ ಕಳೆದ ವರ್ಷದ ದಸರಾ ಮಹೋತ್ಸವದ ಲೆಕ್ಕ ಪತ್ರವನ್ನು ಬಿಡುಗಡೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿ ಪ್ರಿಯ, ಡಿಸಿಎಫ್ ಡಾ.ಕೆ.ಎನ್. ಬಸವರಾಜ್, ಎಸಿಪಿ ಜಿ.ರವೀಂದ್ರ ಹಾಗೂ ಇತರರು ಇದ್ದರು.

2 ಎಕರೆ ಜಮೀನು ಅರಣ್ಯ ಇಲಾಖೆಗೆ

ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಇರುವ 20 ಎಕರೆ ವಿವಾದಿತ ಜಾಗ ಸುದೀರ್ಘ ಕಾನೂನು ಹೋರಾಟದ ಬಳಿಕ ಇದೀಗ ಅರಣ್ಯ ಇಲಾಖೆಯ ಕೈ ಸೇರಿದೆ. ಈ 20 ಎಕರೆ ಜಾಗವು ಚಾಮುಂಡಿಬೆಟ್ಟದ ಗ್ರಾಮದ ವ್ಯಾಪ್ತಿಯ 13 ವಿವಿಧ ಸರ್ವೇ ನಂಬರ್‌ಗಳಲ್ಲಿ ಇತ್ತು. ಇದರಲ್ಲಿ ಚಾಮುಂಡಿ ವನ ಹಾಗೂ ಪರಿಸರ ಮಾಹಿತಿ ಕೇಂದ್ರದ ಜಾಗವು ಸಹ ಒಳಗೊಂಡಿದೆ. ಈ ಜಾಗ ನಮಗೆ ಸೇರಿದ್ದು ಎಂದು ಕೆಲವರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಸ್ಥಳೀಯರ ಪರವಾಗಿ ಆದೇಶ ಹೊರ ಬಿದ್ದಿತ್ತು. ಈ ಜಾಗವನ್ನು 3-5-1947ರಲ್ಲಿ ಖಾಸಗಿಯವರಿಂದ ಭೂ ಸ್ವಾಧೀನ ಪಡಿಸಿಕೊಂಡು ಅರಣ್ಯ ಇಲಾಖೆ ನೀಡಲಾಗಿತ್ತು. ಇದರ ದಾಖಲೆಯನ್ನು ಅರಣ್ಯ ಇಲಾಖೆ ಹೈಕೋರ್ಟ್‌ಗೆ ಸಲ್ಲಿಸಿತ್ತು. ಹೈಕೋರ್ಟ್‌ನಲ್ಲಿ 30-7-2024 ರಂದು ಅರಣ್ಯ ಇಲಾಖೆಯ ಪರವಾಗಿ ತೀರ್ಪು ಬಂದಿದೆ.

1 ಕೋಟಿ ರೂ. ಯೋಜನೆ

ಸದರಿ ಚಾಮುಂಡಿವನವನ್ನು ಮಾದರಿ ವೃಕ್ಷೋದ್ಯಾನವಾಗಿ ಅಭಿವೃದ್ಧಿಪಡಿಸಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾಧಿಗಳಿಗೆ ಹಾಗೂ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅನುಕೂಲವಾಗುವಂತೆ ಉತ್ತಮ ಪ್ರವಾಸಿತಾಣವನ್ನಾಗಿ ಮಾಡಲು ಅರಣ್ಯ ಇಲಾಖೆ 1 ಕೋಟಿ ರೂ. ಮೊತ್ತದ ಯೋಜನೆ ರೂಪಿಸಿದೆ. ಪ್ರಸಕ್ತ ಸಾಲಿನಲ್ಲಿ ವೃಕ್ಷೋದ್ಯಾನದ ಉಳಿದ ಕಾಮಗಾರಿಗಳಾದ ಮಕ್ಕಳ ಉದ್ಯಾನ, ಪವಿತ್ರವನ, ನಕ್ಷತ್ರವನ, ರಾಶಿವನ, ಪರೋಗೊಲ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net