

ಎನ್.ಆರ್.ಪುರ: ಮಾನವನ ಅತಿ ಆಸೆಯೇ ಪರಿಸರ ನಾಶಕ್ಕೆ ಕಾರಣ ಎಂದು ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಹೇಳಿದರು.
ಗುರುವಾರ ಹಿಳುವಳ್ಳಿ ಸರ್ಕಾರಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ್ಕೆರೆ ಕಾರ್ಯಕ್ಷೇತ್ರದಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಲಾಗುತ್ತಿದೆ. ನೂರಾರು ವರ್ಷಗಳ ಹಿಂದಿನ ಮರಗಳನ್ನು ಕಡಿಯಲಾಗುತ್ತಿದೆ. ಪರ್ಯಾಯವಾಗಿ ಸಸಿಗಳನ್ನು ನೆಡದೆ ಕಾಡು ನಾಶ ಮಾಡಲಾಗುತ್ತಿದೆ. ಕಾಡು ಪ್ರಾಣಿಗಳು ಆಹಾರವನ್ನರಿಸಿ ನಾಡಿಗೆ ಬಂದಾಗ ಅವುಗಳನ್ನು ಹೊಡೆದು ಅಪಾಯವನ್ನುಂಟು ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಶಿವಕುಮಾರ್ ಮಾತನಾಡಿ, ಭೂಮಿ ತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿ ವರ್ಷವೂ ಪರಿಸರ ಸಂರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯೋಜನೆಯಡಿ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರಸ್ತುತ ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ 4 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿಳುವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಶಿಲ್ಪಕಲಾ ಮಾತನಾಡಿ, ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ಮಾದರಿ ಎಂದರು.
ಒಕ್ಕೂಟದ ಅಧ್ಯಕ್ಷೆ ಶೋಭಾ, ಯೋಜನೆ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸೇವಾಪ್ರತಿನಿಧಿ ಶಶಿಕಲಾ, ನಾಗರಾಜ್, ಶೌರ್ಯ ವಿಪತ್ತು ತಂಡದ ಸದಸ್ಯರಾದ ಪ್ರವೀಣ, ವೀರಭದ್ರ, ಮಂಜುನಾಥ್, ಪುಟ್ಟಣ್ಣ, ಆಶಾ,ಲೀಲಾವತಿ, ರತ್ನಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಾಕ್, ಸಹ ಶಿಕ್ಷಕರಾದ ನಯಾಜ್, ಪ್ರಸನ್ನ, ಚಂದ್ರಪ್ಪ, ರಾಜೇಶ್ ಇದ್ದರು.