

ಕೆ.ಆರ್.ನಗರ : ಪರಿಸರದ ಉಳಿವಿಗೆ ಪ್ರತಿಯೊಬ್ಬರು ಪೂರಕವಾಗಿ ಕೆಲಸ ಮಾಡಬೇಕು ಎಂದು ಯಡತೊರೆ ಬಿ.ಇಡಿ ಕಾಲೇಜಿನ ಪ್ರಾಂಶುಪಾಲೆ ಎನ್.ಎಸ್.ದೀಪಾ ಹೇಳಿದರು.
ವಿಜ್ಞಾನ ದಿನದ ಅಂಗವಾಗಿ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದ್ದು, ಇದರಿಂದ ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದರು.
ಎಲ್ಲರೂ ಪ್ರತಿ ವರ್ಷ ತಮ್ಮ ಸುತ್ತಮುತ್ತಲಿನ ಜಾಗಗಳಲ್ಲಿ ಒಂದೊಂದು ಗಿಡಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡುವುದರ ಜತೆಗೆ ಪರಿಸರವನ್ನು ಕಾಪಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭೋದಕ ಸಿಬ್ಬಂದಿಯವರು 16ನೇ ವಾರ್ಡಿನ ವ್ಯಾಪ್ತಿಯ ಮನೆ ಮನೆಗೆ ತೆರಳಿ ಸಸಿಗಳನ್ನು ವಿತರಿಸುವುದರ ಜತೆಗೆ ಕಾಲೇಜಿನ ಸುತ್ತಮುತ್ತ ಗಿಡಗಳನ್ನು ನೆಟ್ಟು ಅವುಗಳಿಗೆ ನೀರುಣಿಸಿದರು.
ಕಾಲೇಜು ವ್ಯವಸ್ಥಾಪಕ ಸಿ.ಆರ್.ಲೋಕೇಶ್‌ಭರಣಿ, ಉಪನ್ಯಾಸಕರಾದ ಮಹದೇವ್, ಜಯರತ್ನ, ಕೆ.ಬಿ.ಬೀನಾ, ವಸಂತ, ಮೋಹನಕುಮಾರಿ, ಮಹೇಶ್ವರಿಸ್ವಾಮಿ ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.