

ಮಡಿಕೇರಿ: ಪರಿಸರ ನಾಶವಾದರೆ ಭವಿಷ್ಯದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಮರಗಳ ನಾಶ ತಡೆಗಟ್ಟುವುದು ಪ್ರತೀಯೋರ್ವ ಜವಬ್ದಾರಿಯುತ ನಾಗರಿಕರ ಕರ್ತವ್ಯ ಎಂದು ಪ್ರಭಾರ ವಲಯ ಅರಣ್ಯಾಧಿಕಾರಿ ಮಯೂರ್ ಉದಯ್ ಕರವೇಕರ್ ಹೇಳಿದರು.
ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿತ ಪರಿಸರ ಮಹತ್ವದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವನ ಮಹೋತ್ಸವದಂಥ ಪರಿಸರ ಜಾಗೃತಿ ಆಚರಣೆಗಳು ವರ್ಷಕ್ಕೊಂದೇ ದಿನಕ್ಕೆ ಸೀಮಿತವಾಗಬಾರದು. ಯಾವಾಗ ಸಾಧ್ಯವೋ ಆಗಾಗ್ಗೆ ಪರಿಸರ ಕಾಳಜಿಯ ನಿಟ್ಟಿನಲ್ಲಿ ಹಸಿರ ಸಸಿ ನೆಡುವಿಕೆಯಂಥ ಕಾರ್ಯಕ್ರಮಗಳು ಜರುಗಬೇಕು. ಪರಿಸರ ನಾಶ ತಡೆಯದೇ ಹೋದಲ್ಲಿ ವಿದ್ಯುತ್, ನೀರಿನಂತೆ ಗಾಳಿಗೂ ಅತ್ಯಧಿಕ ಬೆಲೆ ತೆರಬೇಕಾದೀತು ಎಂದರು.
ನಾವು ಮೊದಲು ಪರಿಸರ ರಕ್ಷಣೆಗೆ ಬದ್ಧರಾಗಬೇಕು. ಬೇರೆಯವರಿಗೆ ಉಪದೇಶ ನೀಡುವಮುನ್ನ ಈ ನಿಟ್ಟಿನಲ್ಲಿ ನಾವು ಯಾವ ರೀತಿ ಕಾಳಜಿ ವಹಿಸಿರುವೆ ಎಂಬ ಆತ್ಮಾವಲೋಕನ ಮುಖ್ಯವಾಗಬೇಕು. ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಲಕ್ಷಾಂತರ ಹೆಕ್ಟೇರ್ ನಾಶವಾಗುತ್ತಿದೆ. ಹೀಗಾಗಿ ನಾವೀಗ ಕೈಗೊಂಡಿರುವ ಸಸಿ ನೆಡುವಿಕೆ ಪ್ರಮಾಣ ಏನೇನೂ ಸಾಲದು ಎಂದು ಮಯೂರ್ ಅಭಿಪ್ರಾಯಪಟ್ಟರು.
ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯವನ್ನು ಪ್ರತೀಯೋರ್ವರೂ ಮನದಟ್ಟು ಮಾಡಿಕೊಳ್ಳಬೇಕು. ಪೇಪರ್ ಗ್ಲಾಸ್‌ನಲ್ಲಿಯೂ ಇರುವ ರಾಸಾಯನಿಕಗಳಿಂದಲೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಅವರು, ಶಿಕ್ಷಣವಂತರೇ ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿರುವುದನ್ನು ಗಮನಿಸಿದರೆ ಶಿಕ್ಷಣವಂತರ ಅಜ್ಞಾನ ನಿರೂಪಿತವಾಗುತ್ತದೆ. ಭೂಮಿಯಲ್ಲಿ ಜೀವಿಸಿದ ಮೇಲೆ ನಾವು ಮಾತ್ರ ಭೂಮಿಯಿಂದ ದೊರಕುವ ಪ್ರಯೋಜನಗಳನ್ನು ಪಡೆದುಕೊಳ್ಳುವುದಲ್ಲ. ಬದಲಿಗೆ, ಈ ಭೂಮಿಗೂ ನಮ್ಮಿಂದಾಗುವ ಉಪಕಾರ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅರಣ್ಯ ಇಲಾಖೆ ನೀಡುವ ಉಪಯುಕ್ತ ಸಸಿಗಳನ್ನು ಪಡೆದುಕೊಂಡು ಸೂಕ್ತ ಜಾಗದಲ್ಲಿ ನೆಟ್ಟು, ವನಗಳ ಹೆಚ್ಚಳಕ್ಕೆ ಪ್ರತೀಯೋರ್ವರು ಕಾರಣವಾಗುವಂತೆ ಮಯೂರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕಾರ್ಯದರ್ಶಿ ಹರೀಶ್ ಕಿಗ್ಗಾಲು, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಪ್ರಮುಖರಾದ ಎಚ್.ಟಿ.ಅನಿಲ್, ಎ.ಕೆ.ಜೀವನ್ ಪಾಲ್ಗೊಂಡಿದ್ದರು.