ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಪರಿಸರ ಸಮ್ಮೇಳನ

parisara new
Published on

ಮಂಗಳೂರು: ಸಮ್ಮೇಳನಗಳೆಂದರೆ ಮೆರವಣಿಗೆ, ಭರ್ಜರಿ ವೇದಿಕೆ, ಭೂರಿ ಭೋಜನ, ಒಣ ಚರ್ಚೆ, ಕಾಲಕ್ಷೇಪ ಎಂದು ಮೂಗು ಮುರಿಯುವುದು ಸಾಮಾನ್ಯ. ಆದರೆ ಅವೆಲ್ಲದಕ್ಕಿಂತ ಭಿನ್ನವಾಗಿ ಇದೇ ಮೊದಲ ಬಾರಿ ಪರಿಸರ ಉಳಿಸುವ, ಅದರ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೊಂದು ಕೇಂದ್ರವಾಗಿ ರಾಜ್ಯಮಟ್ಟದ ಎರಡನೇ ಪರಿಸರ ಸಮ್ಮೇಳನಕ್ಕೆ ಮಂಗಳೂರು ಸಜ್ಜಾಗುತ್ತಿದೆ.

ಸಾಮಾನ್ಯ ಸಭಾ ಕಾರ್ಯಕ್ರಮಗಳ ಬದಲು ಪರಿಸರದ ಬಗ್ಗೆ ಇರುವ ಅನೇಕ ಗಂಭೀರ ವಿಚಾರಗಳನ್ನು ಕೋರ್ಟ್ ಕಟಕಟೆಯ ಮುಂದೆ ನ್ಯಾಯಾಧೀಶರಾಗಿ ಕುಳಿತವರ ಸಮಕ್ಷಮ ಇರಿಸುವುದು, ಅದಕ್ಕೆ ಸೂಕ್ತ ಇಲಾಖೆಗಳಿಂದ ಅಗತ್ಯವಿರುವ ಪ್ರತಿ ಮಾಹಿತಿ ಪಡೆದು ವಿಚಾರ ವಿಮರ್ಶೆಗೊಳಪಡಿಸುವುದು, ಆ ವಿಷಯವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬೇಕು ಎಂಬ ಮಂಥನ...ಇವಿಷ್ಟು ನಡೆಯಲಿದ್ದು ಪರಿಸರಾಸಕ್ತರು ಆ ಮೂಲಕ ಸರ್ಕಾರಗಳ ಗಮನ ಸೆಳೆಯಲು ಮುಂದಾಗಿದ್ದಾರೆ.

2017ರ ಏಪ್ರಿಲ್ 24ರಂದು ಮೊದಲ ಸಮ್ಮೇಳನ ಮಂಗಳೂರಿನಲ್ಲಿ ನಡೆದಿತ್ತು. ಮಂಗಳೂರಿನ ಪರಿಸರ ಆರಾಧಕರು ಸೇರಿಕೊಂಡು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಎನ್‌ಇಸಿಎಫ್ ಮುಂದಾಳತ್ವದಲ್ಲಿ ಈಗ ಎರಡನೇ ಸಮ್ಮೇಳನ ಆಯೋಜಿಸುತ್ತಿದ್ದಾರೆ.

ಪರಿಸರಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ವಿದ್ಯುತ್ ಮಂಡಳಿ, ಗೃಹ ಇಲಾಖೆ, ಸಾರಿಗೆ, ಲೋಕೋಪಯೋಗಿ, ಮೀನುಗಾರಿಕೆ ಸಹಿತ ಹಲವು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, ಸಮ್ಮೇಳನದಲ್ಲಿ ಖುದ್ದಾಗಿ ಭಾಗವಹಿಸಬೇಕು ಅಥವಾ ಪ್ರತಿನಿಧಿಗಳನ್ನು ಕಳುಹಿಸುವಂತೆ ವಿನಂತಿಸಲಾಗಿದೆ.

10 ವಕೀಲರು ಭಾಗವಹಿಸುತ್ತಿದ್ದು, ಅವರು ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ. ಕೋರ್ಟ್ ರೂಪದಲ್ಲಿ ವಿಚಾರಣೆ ನಡೆಯಲಿದ್ದು ಹಿರಿಯ ಚಳವಳಿಗಾರ ನೂರಾರು ಮಂದಿಗೆ ನ್ಯಾಯ ಒದಗಿಸಿಕೊಟ್ಟ ಹಿರಿಯ ಡಾ.ರವೀಂದ್ರನಾಥ ಶಾನುಭೋಗ್ ನ್ಯಾಯಾಧೀಶರ ಹೊಣೆ ಹೊರಲಿದ್ದಾರೆ. ಚರ್ಚಿಸಲಾದ ವಿಚಾರಗಳಿಗೆ ಅವರು ನಿರ್ಣಯ ಕೈಗೊಳ್ಳಲಿದ್ದಾರೆ.

ಹಾಲಕ್ಕಿ ಬುಡಕಟ್ಟು ಸಮುದಾಯದ ಜಾನಪದ ಹಾಡುಗಾರ್ತಿ, ಪರಿಸರ ಹೋರಾಟಗಾರ್ತಿ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ, ವೃಕ್ಷ ಮಾತೆ ಪದ್ಮಶ್ರೀ ತುಳಸಿ ಗೌಡ, ಸಿದ್ದಿ ಸಮುದಾಯದ ನಾಯಕ, ಪರಿಸರ ಹೋರಾಟಗಾರ ಡಿಯಾಗೋ ಬಸ್ತ್ಯಾವ್ ಸಿದ್ದಿ, ಪಾಡ್ದನ ಹಾಡುಗಾರ್ತಿ ಕುತ್ತಾರು ತಿಮ್ಮಕ್ಕ , ಕೊರಗ, ಕುಡುಬಿ ಸಮುದಾಯದ ನಾಯಕರು, ಪರಿಸರ ಹೋರಾಟಗಾರರು ಇದರಲ್ಲಿ ಭಾಗ ವಹಿಸಲಿದ್ದಾರೆ.

ಪ್ರಮುಖ ವಿಚಾರಗಳು

ಸುಮಾರು 138 ಕಡತಗಳಿದ್ದರೂ ಅದರಲ್ಲಿ ಸಮಯ, ಸಂದರ್ಭ ನೋಡಿಕೊಂಡು, 36ರಷ್ಟು ವಿಚಾರಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ, ಎತ್ತಿನಹೊಳೆ ಯೋಜನೆ ಮೂಲಕ ಜನರನ್ನು ಮೂರ್ಖರನ್ನಾಗಿಸುವ ಯತ್ನದ ಬಗ್ಗೆ ಅದೇ ಭಾಗದ ಹೋರಾಟಗಾರ ಆಂಜನೇಯ ರೆಡ್ಡಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಪಶ್ಚಿಮ ಘಟ್ಟ ಹಲವು ಯೋಜನೆಗಳಿಂದ ಕಳೆದ ಮಳೆಗಾಲದಲ್ಲಿ ಕುಸಿದು ಕಂಗೆಟ್ಟಿರುವಾಗಲೂ ಯಾವುದೇ ಅಧ್ಯಯನ ನಡೆಸದಿರುವ ವಿಚಾರ. ವನ್ಯಜೀವಿಗಳ ಕಳ್ಳಬೇಟೆ, ಅದಕ್ಕಾಗಿ ಕೃಷಿಕರ ನೆಪದಲ್ಲಿ ಅನವಶ್ಯಕವಾಗಿ ರೈಫಲ್, ಬಂದೂಕು ಪರವಾನಗಿ ನೀಡುತ್ತಿರುವುದು. ರಕ್ಷಿತಾರಣ್ಯದಲ್ಲಿ ಜೇನುತುಪ್ಪ ತೆಗೆಯಲು ಗುತ್ತಿಗೆ ನೀಡುವುದರಿಂದ ಜೇನುಹುಳಗಳ ಸಂತತಿ ನಿರ್ಮೂಲನವಾಗುತ್ತಿರುವುದು. ಕಾಡ್ಗಿಚ್ಚು ಪ್ರತಿವರ್ಷ ಕಂಗೆಡಿಸಿದರೂ ಅದನ್ನು ಹತ್ತಿಕ್ಕಲು ಹೆಲಿಕಾಪ್ಟರ್, ಫೈರ್ ಬ್ಲೋ ಮಷೀನ್ ಖರೀದಿಸದಿರುವುದು.

ರಂಜಿಸಲಿದೆ ಆದಿವಾಸಿಗಳ ನೃತ್ಯ, ಗಾಳಿಪಟ ಸಮ್ಮೇಳನದ ಹೊರತಾಗಿ ಕುಡುಬಿಗಳ ಗುಮ್ಟ ನೃತ್ಯ, ಹಾಲಕ್ಕಿಗಳ ಹಾರ್ಲೆ ನೃತ್ಯ, ಸಿದ್ದಿಗಳ ಧಮಾಮಿ ನೃತ್ಯ, ಕೊರಗ ನೃತ್ಯಗಳು ರಂಜಿಸಲಿದೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಸುಕ್ರಿ ಅಜ್ಜಿ ತಮ್ಮ ಹಾರ್ಲೆ ನೃತ್ಯದ ಪದಗಳನ್ನು ಹಾಡುವ ಮೂಲಕವೇ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಬೆಳಗ್ಗಿನಿಂದ ಸಾಯಂಕಾಲ ತನಕವೂ ಕಾರ್ಯಕ್ರಮಗಳು ನಡೆಯಲಿದ್ದು, ಮಕ್ಕಳಿಂದ ಪರಿಸರ ನಾಟಕ, ಮಲೆನಾಡು ಗಿಡ್ಡ ಹಸುಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ, ಟೀಂ ಮಂಗಳೂರು ಸದಸ್ಯರಿಂದ ಗಾಳಿಪಟ ಹಾರಾಟ ಇತ್ಯಾದಿಗಳೂ ಇರುತ್ತವೆ.

ಸಮಸ್ಯೆ, ವಿಚಾರಗಳನ್ನು ಇಲಾಖಾಧಿಕಾರಿಗಳ ಮುಂದೆ ಪ್ರಸ್ತುತಪಡಿಸಲಾಗುವುದು. ಅದಕ್ಕೆ ಅವರಿಂದ ಸರಿಯಾದ ಉತ್ತರ ನಿರೀಕ್ಷಿಸುತ್ತೇವೆ. ಅವರಿಗಾಗಿ ಕುರ್ಚಿಗಳನ್ನೂ ಮೀಸಲಿಡುತ್ತೇವೆ. ಅವರು ಬಂದು ಜವಾಬ್ದಾರಿ ಮೆರೆಯುವ ನಿರೀಕ್ಷೆ ಇರಿಸಿದ್ದೇವೆ. ಶಶಿಧರ ಶೆಟ್ಟಿ, ಸಂಚಾಲಕ, ಎನ್‌ಇಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net