ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ನೈತಿಕ ಜವಾಬ್ದಾರಿ; ಡಾ. ಜಾವೀದ್ ಜಮಾದಾರ

KSWU NSS SHIBIRA
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ನೈರ್ಮಲ್ಯ ಮತ್ತು ಜಾಗೃತಿ ಅರಿವು ಒಂದು ದಿನದ ಶಿಬಿರವನ್ನು ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಡಾ. ಜಾವೀದ್ ಉದ್ಘಾಟಿಸಿದರು. ವಿದ್ಯಾಧಿಕಾರಿ ಪ್ರೊ. ಶಾಂತಾದೇವಿ, ಪ್ರಕಾಶ ರಾಠೋಡ, ಪ್ರೊ.ವಿಷ್ಣು ಶಿಂಧೆ ಮತ್ತಿತರರಿದ್ದಾರೆ.
Published on

ವಿಜಯಪುರ: ನಮ್ಮ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಹಾಗೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯ ಡಾ. ಜಾವೀದ್ ಜಮಾದಾರ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಸಭಾ ಭವನದಲ್ಲಿ ಲಾಡಲಿ ಫೌಂಡೇಶನ್ ನವದೆಹಲಿ, ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಎನ್‌ಎಸ್‌ಎಸ್ ಕೋಶ, ವಿದ್ಯಾರ್ಥಿಗಳ ಕ್ಷೇಮಪಾಲನಾ ನಿರ್ದೇಶನಾಲಯ, ಮಹಿಳಾ ಅಧ್ಯಯನ ವಿಭಾಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಯುವ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ನೈರ್ಮಲ್ಯ ಜಾಗೃತಿ ಕುರಿತ ಒಂದು ದಿನದ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛತೆ ಎಂದರೆ ಪರಿಸರ ಸಂರಕ್ಷಣೆಯೂ ಆಗಿದೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಮಾಲಿನ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ತ್ಯಾಜ್ಯವನ್ನು ಕಡಿಮೆಮಾಡಿ ಮರುಬಳಿಕೆ ಮಾಡುವುದು ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಲಾಡಲಿ ಫೌಂಡೇಶನ್‌ದ ಸ್ವಚ್ಛತಾ ರಾಯಭಾರಿ ಶೀಫಾ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಅಸಮರ್ಪಕ ನೈರ್ಮಲ್ಯ ಸೌಲಭ್ಯಗಳು ಹೆಣ್ಣು ಮಕ್ಕಳ ಶಿಕ್ಷಣ ಮೇಲೆ ನೇರ ಪರಿಣಾಮ ಬೀರುತ್ತದೆ. ಸರಿಯಾದ ಸೌಕರ್ಯಗಳ ಕೊರತೆಯಿಂದ ಅನೇಕ ಹೆಣ್ಣು ಮಕ್ಕಳು ತಮ್ಮ ಋತುಚಕ್ರದ ಸಮಯದಲ್ಲಿ ಶಾಲೆಯನ್ನು ಕಳೆದುಕೊಳ್ಳುತ್ತಾರೆ. ಇದು ಅವರ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದಲ್ಲದೆ ಡ್ರಾಫೌಟ್ ದರಕ್ಕೆ ಕಾರಣವಾಗುತ್ತದೆ. ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಮಹಿಳೆಯರ ಆರೋಗ್ಯ ಕಾಪಾಡಲು ಉತ್ತಮ ನೈರ್ಮಲ್ಯ ಸೌಲಭ್ಯಗಳನ್ನು ನೀಡಲು ಹೆಚ್ಚು ಒತ್ತನ್ನು ನೀಡಬೇಕು ಎಂದರು.

ವಿದ್ಯಾಧಿಕಾರಿ ಪ್ರೊ. ಶಾಂತಾದೇವಿ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಪ್ರೊ.ವಿಷ್ಣು ಶಿಂಧೆ, ರಾಹುಲ ಡೊಂಗ್ರೆ ಮಾತನಾಡಿದರು. ಡಾ.ಅಶೋಕ ಸುರಪೂರ, ಡಾ. ಉದಯಕುಮಾರ ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net