ಪರಿಸರ ಕಾಳಜಿ ನಿತ್ಯ ಕಾಯಕವಾಗಲಿ

26KDR2
ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎನ್.ರಾಮ್ ಪ್ರಶಾಂತ್ ಚಾಲನೆ ನೀಡಿದರು. ಪಿಎಸ್‌ಐ ಪವನ್‌ಕುಮಾರ್, ಗಿರೀಶ್, ಶೇಖರಪ್ಪ, ಸುರೇಶ್‌ನಾಯ್ಕ, ಗೋವಿಂದಸ್ವಾಮಿ ಇತರರಿದ್ದರು.
Published on

ಕಡೂರು: ಪರಿಸರದ ಕಾಳಜಿ ಕೇವಲ ವರ್ಷದಲ್ಲಿ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯದ ಕಾಯಕ ಆಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀೀಶ ಎಂ.ಎನ್.ರಾಮ್‌ಪ್ರಶಾಂತ್ ತಿಳಿಸಿದರು.

ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಭಾನುವಾರ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಗಿಡಗಳ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಯಲು ಪ್ರದೇಶದ ತಾಲೂಕಿನ ಗಿಡಮರಗಳ ಸಂಖ್ಯೆ ಹೆಚ್ಚಳವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ನಾಲ್ಕಾರು ಗಿಡಗಳನ್ನು ನೆಟ್ಟು ಬೆಳೆಸಬೇಕು. ಸಿಂಗಟಗೆರೆ ಪೊಲೀಸ್ ಠಾಣೆ ಸಿಬ್ಬಂದಿ ತಮ್ಮ ವಸತಿ ಗೃಹಗಳ ಆವರಣದಲ್ಲಿ ಗಿಡಗಳನ್ನು ನೆಡುತ್ತಿರುವುದು ಶ್ಲಾಘನೀಯ ಎಂದರು.
ಗಿಡಮರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನೂ ಇಲ್ಲಿನ ಸಿಬ್ಬಂದಿ ತೆಗೆದುಕೊಳ್ಳಬೇಕು. ಸಾಲು ಮರದ ತಿಮ್ಮಕ್ಕ ಸಾವಿರಾರು ಮರಗಳನ್ನು ಬೆಳೆಸಿರುವಾಗ ನಾವು ಕನಿಷ್ಠ ನಾಲ್ಕೈದು ಮರಗಳನ್ನು ಬೆಳೆಸದಿದ್ದರೆ ಬದುಕು ವ್ಯರ್ಥವಾಗುತ್ತದೆ. ಬೇರೆಯವರಿಂದ ಬದಲಾವಣೆಯನ್ನು ನಿರೀಕ್ಷಿಸುವುದಕ್ಕಿಂತ ಮೊದಲು ನಾವು ಬದಲಾವಣೆಗೆ ತೆರೆದುಕೊಳ್ಳಬೇಕು. ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಉಳಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕು ಎಂದರು.
ಪಿಎಸ್‌ಐ ಸಿ.ಸಿ.ಪವನ್‌ಕುಮಾರ್ ಮಾತನಾಡಿ, ಕಳೆದ ಎರಡು-ಮೂರು ತಿಂಗಳ ತಾಪಮಾನವು ಪ್ರತಿಯೊಬ್ಬರನ್ನು ಹೈರಾಣಾಗಿಸಿದೆ. ಇದು ಪ್ರಕೃತಿ ನಮಗೆ ನೀಡಿರುವ ಮೊದಲ ಎಚ್ಚರಿಕೆಯ ಗಂಟೆಯಾಗಿದೆ. ಹೀಗೆ ನಾವು ಪ್ರಕೃತಿಯನ್ನು ಹಾಳು ಮಾಡುತ್ತಾ ಹೋದರೆ ಮುದೊಂದು ದಿನ ಪ್ರಕೃತಿ ನಮಗೆ ತಕ್ಕಶಾಸ್ತಿ ಮಾಡಲಿದೆ. ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಜಲ ಮೂಲಗಳನ್ನು ನಾಶ ಮಾಡುವುದು ಮತ್ತು ಮಲಿನಗೊಳಿಸುವುದು ಮುದೊಂದು ದಿನ ಮಾನವ ಕುಲದ ಅಂತ್ಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ತಡೆಗಟ್ಟಲು ಇರುವ ಏಕೈಕ ಉಪಾಯವೆಂದರೆ ಅದು ಗಿಡ, ಮರಗಳನ್ನು ಬೆಳೆಸುವುದು. ರೈತರು ಕೃಷಿ ಜಮೀನಿನ ಬದುಗಳಲ್ಲಿ ಮರಗಳನ್ನು ಬೆಳೆಸಬೇಕು. ಜಮೀನಿನಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಮಳೆಯ ನೀರು ಹರಿದು ಹೋಗದಂತೆ ತಡೆಯಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಸರ್ಕಾರ ಇಂತಹ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಆದರೆ ಸಾರ್ವಜನಿಕರು ಸಹಕರಿಸದಿದ್ದರೆ ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂದರು.
ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಹಖಲೀಲ್, ಗ್ರಾಪಂ ಸದಸ್ಯ ಸಿ.ಗಿರೀಶ್ ಆರಾಧ್ಯ, ಮಾಜಿ ಅಧ್ಯಕ್ಷ ಗಂಗಾಧರ ನಾಯ್ಕ, ಮಾಜಿ ಸದಸ್ಯ ಎಸ್.ಕೆ.ಮಲ್ಲಿಕಾರ್ಜುನ್, ಎಸ್‌ಐಗಳಾದ ಟಿ.ಶೇಖರಪ್ಪ, ಬಿ.ಸುರೇಶ್ ನಾಯ್ಕ, ಗ್ರಾಮಸ್ಥರಾದ ಕೆ.ಕುಮಾರಪ್ಪ, ಎಚ್.ಎಸ್.ಉದಯ ಕುಮಾರ್, ಬಿ.ಪಿ.ದೇವಾನಂದ್, ಶ್ರೀನಿವಾಸ್, ಪೊಲೀಸ್ ಸಿಬ್ಬಂದಿ ಗೋವಿಂದಸ್ವಾಮಿ, ಧನಪಾಲ ನಾಯ್ಕ, ಹರೀಶ್, ಪಿ.ಕೆ.ಕಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net