

ಸಿಂಧನೂರು: ಮಾನವನ ದುರಾಸೆಯಿಂದ ಅರಣ್ಯ ನಾಶವಾಗುತ್ತಿದ್ದು, ಕಾಡಿನಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ ಎಂದು ಅರಣ್ಯ ಇಲಾಖೆ ಉಪವಲಯದ ಅಧಿಕಾರಿ ಅರುಣಾ ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಿ
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಪ್ರಾಣಿಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹುಲಿ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದರು. ಭಾರತದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಅರಣ್ಯ ನಾಶವಾಗಿರುವುದು. ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ. ಭೂಮಿ ಸಮತೋಲನದಿಂದ ಇರಲು ಮನುಷ್ಯನ ಜತೆಗೆ ಪ್ರಾಣಿಗಳೂ ಸಮನಾಗಿ ಇರಬೇಕು ಎಂದರು.
ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯದ ಅರಣ್ಯಾಧಿಕಾರಿ ನೀಲಿಮಾ, ಆನ್‌ಲೈನ್ ಮೂಲಕ ಹುಲಿ ಸಂರಕ್ಷಣಾ ತಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಪರಿಸರ ಕಾಳಜಿ ನಮ್ಮೆಲ್ಲರ ಉಸಿರಾಗಬೇಕು.
ಹುಲಿ, ಚಿರತೆ, ಹಾವು, ಕರಡಿ ಇತ್ಯಾದಿ ಪ್ರಾಣಿಪಕ್ಷಿಗಳು ಮನುಷ್ಯನ ಜತೆ ಇರಬೇಕು. ಕಾಡು ಮತ್ತು ನಾಡು ಎರಡು ಸಮಾನಾಗಿರಬೇಕು. ಅತಿಯಾದ ನಗರೀಕರಣದಿಂದ ಪ್ರಾಣಿಸಂಕುಲ ನಾಶವಾಗುತ್ತಿದೆ ಎಂದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿಕಿರಣ್, ಐಕ್ಯೂಎಸಿ ಸಂಚಾಲಕ ಬಸವರಾಜ ತಡಕಲ್, ಪ್ರಾಧ್ಯಾಪಕಿ ಡಾ.ಇಶ್ರತ್‌ಬೇಗಂ, ಉಪನ್ಯಾಸಕರಾದ ರಾಜೇಶ್, ಬಸವರಾಜ ಇದ್ದರು.