

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಫರಂಗಿಪೇಟೆ ಸಮೀಪದ ಅರ್ಕುಳದ ರಸ್ತೆ ಬದಿಯಲ್ಲಿ ನಿತ್ಯವೂ ನಿಲ್ಲುವ ಮಂಗಳೂರಿನ ಹಸಿರುದಳದ ನಾಗರಾಜ್ ಎಂಬುವರು ‘ರಸ್ತೆ ಬದಿಯಲ್ಲಿ ಕಸ ಎಸೆಯಬೇಡಿ’ ಎಂಬ ಜಾಗೃತಿ ಫಲಕ ಪ್ರದರ್ಶಿಸುತ್ತಾ ಮೆಚ್ಚುಗೆ ಪಡೆದಿದ್ದಾರೆ
ನಾಗರಾಜ್ ಅವರು ಹಲವು ತಿಂಗಳಿನಿಂದ ರಸ್ತೆ ಬದಿಯಲ್ಲಿ ಈ ಫಲಕ ಪ್ರದರ್ಶಿಸುತ್ತ ನಿಲ್ಲುತ್ತಿದ್ದು, ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದ ಜತೆಗೆ ನಿತ್ಯವೂ ಬಜಾಲ್ನಿಂದ ಫರಂಗಿಪೇಟೆ ಕಡೆಗೆ ಆಗಮಿಸಿ ರಾ.ಹೆ.ಯ ಕಣ್ಣೂರು-ಅಡ್ಯಾರ್ನಿಂದ ಅರ್ಕುಳ ಶ್ರೀರಾಮ ವಿದ್ಯಾಸಂಸ್ಥೆಯ ತನಕ ಹೆಚ್ಚು ಕಸ ಎಸೆಯಲ್ಪಡುವ ಆಯಕಟ್ಟಿನ ಸ್ಥಳದಲ್ಲಿ ಫಲಕ ಹಿಡಿದು ನಿಂತು ಜಾಗೃತಿ ಮೂಡಿಸುತ್ತಿದ್ದಾರೆ.
ಗಡಿಭಾಗದಲ್ಲಿ ಕಸದರಾಶಿ: ಫರಂಗಿಪೇಟೆಯ ರಾಷ್ಟ್ರೀಯ ಹೆದ್ದಾರಿ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಅರ್ಕುಳ ಅಡ್ಯಾರ್ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಈ ಎರಡೂ ಪ್ರದೇಶದ ಗಡಿಭಾಗದಲ್ಲಿರುವ ಶ್ರೀರಾಮ ವಿದ್ಯಾಸಂಸ್ಥೆಯಿಂದ ಸ್ವಲ್ಪ ದೂರದ ರಸ್ತೆ ಬದಿಯಲ್ಲಿ ಕಸದ ಬೃಹತ್ ರಾಶಿಯೇ ಇದ್ದು, ನಿತ್ಯವೂ ವಾಹನಗಳಲ್ಲಿ ಆಗಮಿಸುವ ಜನರು ಈ ಸ್ಥಳದಲ್ಲಿ ಕಸ ಎಸೆದು ತೆರಳುತ್ತಿದ್ದಾರೆ.
ಸಂಸದ ಬ್ರಿಜೇಶ್ ಮೆಚ್ಚುಗೆ
ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸುಳ್ಯದಲ್ಲಿ ಕಾರ್ಯಕ್ರಮ ಮುಗಿಸಿ ಮಂಗಳೂರಿನತ್ತ ಆಗಮಿಸುತ್ತಿದ್ದ ಸಂದರ್ಭ ಅರ್ಕುಳದಲ್ಲಿ ಫಲಕ ಹಿಡಿದು ಏಕಾಂಗಿಯಾಗಿ ನಿಂತಿದ್ದ ನಾಗರಾಜ್ ಅವರನ್ನು ಕಂಡಿದ್ದು, ಸಮೀಪಕ್ಕೆ ತೆರಳಿ ಮಾತನಾಡಿಸಿದ್ದಾರೆ. ಸ್ವಚ್ಛತಾ ಕಾರ್ಯ, ರಸ್ತೆ ದುರಸ್ತಿ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ತಮ್ಮನ್ನು ಸಂಪರ್ಕಿಸಿ ನೆರವು ಪಡೆಯಬಹುದೆಂದು ಸಂಸದ ನಾಗರಾಜ್ ಅವರಿಗೆ ಭರವಸೆ ನೀಡಿದರು.