

ಮಂಡ್ಯ: ಹಬ್ಬ ಆಚರಣೆಯ ಹೆಸರಿನಲ್ಲಿ ಪಟಾಕಿಗಳನ್ನು ಸಿಡಿಸಿ ಪರಿಸರ ಮಾಲಿನ್ಯ ಮಾಡಬಾರದು. ಇಲ್ಲದಿದ್ದರೆ ವಿಷಾನಿಲದಿಂದ ಮನುಷ್ಯನ ಆರೋಗ್ಯವೇ ಹಾಳಾಗುತ್ತದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ತಾಲೂಕಿನ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ಸಕ್ಕರೆನಾಡು ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೆಗೌಡ ಚಾರಿಟೇಬಲ್ ಟ್ರಸ್ಟ್ ಕೊಪ್ಪ ಸಹಯೋಗದಲ್ಲಿ ಶನಿವಾರ ‘ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ; ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸಸಿ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳೆಲ್ಲ ಪಟಾಕಿ ತ್ಯಜಿಸಿ ಸಸಿ ನೆಟ್ಟು ಪೋಷಣೆ ಮಾಡಿ ಪರಿಸರ ಸಂರಕ್ಷಿಸಬೇಕೆಂದು ಸಲಹೆ ನೀಡಿರು.
ಪಟಾಕಿ ಸಿಡಿಸುವುದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಬದುಕಿನ ಸಾಂಪ್ರದಾಯಿಕ ಶೈಲಿಗೆ ವಿರೋಧಿಯಾದ ಚಟುವಟಿಕೆ. ಹಿಂದಿನ ಕಾಲದಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯ ಇರಲೇ ಇಲ್ಲ. ಕಳೆದ ಶತಮಾನದ ಆರಂಭದಲ್ಲಿ ಮತಾಪು ಸಿಡಿಸುವ ಗರ್ನಾಲು ಹೊಡೆಯುವ ಸಂಪ್ರದಾಯ ಆರಂಭವಾದವು. ಆದರೆ, ಅವೆಲ್ಲವೂ ಪಾಶ್ಚಾತ್ಯ ತಂತ್ರಜ್ಞಾನ ಮತ್ತು ರಾಸಾಯನಿಕ ಉದ್ಯಮದ ಕೊಡುಗೆಗಳೇ ಹೊರತು ಭಾರತದ ಸಂಪ್ರದಾಯದ ಸಹಜ ಕ್ರಿಯೆಗಳಲ್ಲ. ಪ್ರತಿಯೊಬ್ಬರು ಶಬ್ಧರಹಿತ, ವಿಷರಹಿತ ಬೆಳಕಿನ ಹಬ್ಬ ಆಚರಿಸುವ ಕಡೆಗೆ ಗಮನ ಕೊಡೋಣ. ಪ್ರಕೃತಿಯ ಜತೆಗೆ ಒಂದಾಗಿ ಸಂಭ್ರಮಿಸುವುದೇ ಭಾರತೀಯ ಹಬ್ಬಗಳ ವಿಶೇಷತೆ. ಆದ್ದರಿಂದ ಕೃತಕತೆಗೆ ವಿದಾಯ ಹೇಳಿ ಸಹಜ ದೀಪಗಳ ಬೆಳಕಿನಲ್ಲಿ ನಮ್ಮನ್ನು ನಾವೇ ಬೆಳಗಿಸಿಕೊಳ್ಳುವುದು ಸಂಸ್ಕೃತ ಲಕ್ಷಣ ಎಂದು ವಿವರಿಸಿದರು.
ಸಕ್ಕರೆನಾಡು ಲಯನ್ಸ್ ಸಂಸ್ಥೆ ಕೆ.ಆರ್.ಶಶಿಧರ ಈಚಗೆರೆ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ಬೋರೇಗೌಡ, ಶಿಕ್ಷಕರಾದ ಕೆ.ಟಿ.ನಾರಾಯಣ ರಾಜೇ ಅರಸ್, ಎ.ಆರ್.ಚಂದ್ರೇಶ್, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ, ಎನ್.ಕೆ.ಪವಿತ್ರಾ ಇತರರಿದ್ದರು.