

ಬೆಳಗಾವಿ: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂ ಕುಸಿತ, ಗುಡ್ಡ ಕುಸಿತದ ದುರಂತ ಅರಿತು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಕಾರ್ಯಕರ್ತರ ಸಂಘಟನೆಯಿಂದ ಜಿಲ್ಲಾಡಳಿತದ ಮೂಲಕ ಬುಧವಾರ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಉತ್ತರ ಭಾರತದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಹಲವು ಭೂ ಕುಸಿತಗಳಾಗಿವೆ. ಪ್ರಕೃತಿ ಮೇಲೆ ಮಾನವನ ಅತಿಯಾದ ದಬ್ಬಾಳಿಕೆ ಇಂತಹ ಅನಾಹುತಗಳಿಗೆ ಕಾರಣವಾಗಿವೆ. ಪಶ್ಚಿಮಘಟ್ಟದ ಸೂಕ್ಷ್ಮತೆ, ಅದರ ಜಾಗತಿಕ ಮಹತ್ವ ಅರಿತು ಪ್ರೊ.ಮಾಧವ ಗಾಡ್ಗೀಳ್ ಸಮಿತಿ 2011ರಲ್ಲಿ ಸಲ್ಲಿಸಿದ ವರದಿಯು ಪರಿಸರಕ್ಕೆ ಹಾನಿ ಮಾಡುವಂತಹ ಯಾವುದೆ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಶಿಫಾರಸು ಮಾಡಿತ್ತು. ಹೀಗಾಗಿ ಪ್ರೊ.ಗಾಡ್ಗೀಳ್ ಕುರಿತು ಜನರಲ್ಲಿರುವ ತಪ್ಪ ಕಲ್ಪನೆಗಳನ್ನು ಹೋಗಲಾಡಿಸಬೇಕು. ಕರಾವಳಿ ನಿಯಂತ್ರಿತ ವಲಯ ಮಾದರಿಯಲ್ಲಿ ಪಶ್ಚಿಮ ಘಟ್ಟದ ನದಿಗಳ ನದಿತಟ ನಿಯಂತ್ರಿತ ವಲಯ ಗುರುತಿಸಿ ಪರಿಸರ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಸೂಕ್ಷ್ಮ ಪ್ರದೇಶದಲ್ಲಿ ಪ್ರವಾಸೋದ್ಯಮ ನಿಷೇಧಿಸಬೇಕು. ಪಂಚಾಯಿತಿ, ಹೋಬಳಿ, ತಾಲೂಕು, ಜಿಲ್ಲಾಮಟ್ಟದಲ್ಲಿ ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣಾ ಪಡೆ ರಚಿಸಬೇಕು. ಪ್ರತಿ ಪಂಚಾಯಿತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಮಾಡಬೇಕು. ಯಾವುದೆ ಯೋಜನೆ ಮಾಡುವಾಗ ರಾಜಕೀಯೇತರ ತಜ್ಞರನ್ನು ಉಸ್ತುವಾರಿಗಳನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಡಾ.ಶಿವಾಜಿ ಕಾಗಣಿಕರ, ಗೀತಾ ಸಾಹು, ಕವಿತಾ ಜೆ., ಕಿರಣ ಗೌಡೆ, ನಿತಿನ್ ಧೋಂಡ, ನೈಲಾ ಕೊಯಲೋ, ಸುನೀತಾ ಪಾಟೀಲ ಇತರರಿದ್ದರು.