ಪರಿಸರ ರಕ್ಷಣೆ ನಮ್ಮ ಜವಾಬ್ದಾರಿ

26knk2
ಕನಕಗಿರಿ ಹಾಗೂ ಹುಲಿಹೈದರ ಹೋಬಳಿ ಮಟ್ಟದ ಗ್ರಾಮ ಪರಿಸರ ಅಭಿವೃದ್ಧಿ ಹಾಗೂ ನಿರ್ವಹಣಾ ಕಾರ್ಯಾಗಾರದಲ್ಲಿ ಗಸ್ತು ಅರಣ್ಯ ಪಾಲಕ ದಾವಲ್‌ಸಾಬ್ ಮಾತನಾಡಿದರು. ಬಸರಿಹಾಳ ಗ್ರಾಪಂ ಉಪಾಧ್ಯಕ್ಷ ಶಿವಪ್ಪ, ಸದಸ್ಯ ಪಂಪಾಪತಿ ನಾಯಕ, ಪ್ರಮುಖರಾದ ನಿಂಗಪ್ಪ ಜಾಲಿಹುಡಾ ಇದ್ದರು.
Published on

ಕನಕಗಿರಿ: ಸಮುದಾಯಿಕ ಆಸ್ತಿಯಲ್ಲಿ ಪರಿಸರ ಅಭಿವೃದ್ಧಿ ಮಾಡುವುದರಿಂದ ಉತ್ತಮ ಮಳೆ, ಅಂತರ್ಜಲ ವೃದ್ಧಿಯಾಗಲಿದೆ ಎಂದು ಗಸ್ತು ಅರಣ್ಯಪಾಲಕ ದಾವಲ್‌ಸಾಬ್ ಹೇಳಿದರು.

ಇಲ್ಲಿನ ಸಮೂಹ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕಗಿರಿ ಹಾಗೂ ಹುಲಿಹೈದರ ಹೋಬಳಿ ಮಟ್ಟದ ಗ್ರಾಮ ಪರಿಸರ ಅಭಿವೃದ್ಧಿ ಹಾಗೂ ನಿರ್ವಹಣಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಗಿಡ ಮರಗಳು, ನೀರಿನ ಇಂಗುವಿಕೆ ಕೊರತೆಯಿಂದಾಗಿ ಪ್ರಸ್ತುತ ನಮ್ಮ ಭಾಗದಲ್ಲಿ 45ಡಿಗ್ರಿ ತಾಪಮಾನ, ಮಳೆಯ ಅಭಾವ ಕಾಣುತ್ತಿದ್ದೇವೆ. ಅಂತರ್ಜಲ ಕೊರತೆಯಿಂದ ಬೋರ್‌ವೆಲ್‌ಗಳು ಬತ್ತುತ್ತಿವೆ. ಪರಿಸರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆಸ್ತಿಗಳಾದ ಗುಡ್ಡ, ಗೋಮಾಳ, ಗೋಕಟ್ಟೆ, ಸ್ಮಶಾನ, ಹಳ್ಳ ಸೇರಿ ಇತರೇ ಸರ್ಕಾರಿ ಆಸ್ತಿಗಳನ್ನು ಕಾಪಾಡಿಕೊಂಡು ಗಿಡಗಳನ್ನು ನೆಟ್ಟರೆ ಮಳೆಯಾಗುತ್ತದೆ. ನೀರನ್ನು ಇಂಗಿಸಿದರೆ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ಕೃಷಿ ಚಟುವಟಿಕೆ ಜತೆಗೆ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಲಿದೆ ಎಂದರು.

ಪ್ರಾರಂಭ ಸಂಸ್ಥೆಯ ಜಿಲ್ಲಾ ಸಂಯೋಜಕ ಮುದುರಂಗಪ್ಪ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಯಿಂದ ಸಾಮುದಾಯಿಕ ಆಸ್ತಿ ಕಡಿಮೆಯಾಗಿದೆ. ಅದಕ್ಕಾಗಿ ತಾಲೂಕಿನ 6 ಗ್ರಾಪಂನ 25ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಗ್ರಾಮ ಹಾಗೂ ಹೋಬಳಿಯಲ್ಲಿ ಗ್ರಾಮ ಪರಿಸರ ಅಭಿವೃದ್ಧಿ ಹಾಗೂ ನಿರ್ವಹಣಾ ಸಮಿತಿ ರಚಿಸಲಾಗಿದೆ.

ಎಫ್‌ಇಎಸ್ (ಗ್ರಾಮ ಪರಿಸರ ಅಭಿವೃದ್ಧಿ) ಮತ್ತು ಪ್ರಾರಂಭ ಸಂಸ್ಥೆ ವತಿಯಿಂದ ಸಾಮುದಾಯಿಕ ಆಸ್ತಿಗಳನ್ನು ಈಗಾಗಲೇ ಗುರುತಿಸಿ ಕಾಮನ್ ಲ್ಯಾಂಡ್ ಮ್ಯಾಪಿಂಗ್ (ಸಿಎಲ್‌ಎಂ) ಮಾಡಿ ಸ್ಥಳೀಯ ಗ್ರಾ ಪಂನಲ್ಲಿ ಭೂ ದಾಖಲಾತಿ ನೋಂದಣಿ ಮಾಡಲಾಗಿರುತ್ತದೆ. ಈ ಭೂಮಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪರಿಸರ ಅಭಿವೃದ್ಧಿ ಹಾಗೂ ನಿರ್ವಹಣಾ ಸಮಿತಿ ತರಬೇತಿ ನೀಡಲಾಗುತ್ತಿದೆ.

ಸದರಿ ಭೂಮಿಗಳಲ್ಲಿ ನರೇಗಾ ಯೋಜನೆಯಲ್ಲಿ ಟ್ರಂಚ್ ನಿರ್ಮಾಣ, ಬದು ನಿರ್ಮಾಣ, ಗಿಡಗಳನ್ನು ನೆಡುವುದು, ಇಳಿಜಾರು ಪ್ರದೇಶಗಳಿಂದ ನೀರು ಹರಿಯುವುದನ್ನು ತಡೆಗಟ್ಟಬಹುದು ಎಂದರು. ಗ್ರಾಪಂ ಸದಸ್ಯರಾದ ಹನುಮನಗೌಡ ಪಾಟೀಲ, ಹುಲಿಗಮ್ಮ ಕಲಿಕೇರಿ, ನಿಂಗಪ್ಪ, ಜ್ಯೋತಿ, ಸಮಿತಿ ತಾಲೂಕು ಸಂಯೋಜಕ ವಿಶ್ವನಾಥ ಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net