ಪ್ಲಾಸ್ಟಿಕ್ ಆಮದು ನಿಲ್ಲಿಸಿ,  ಅಕ್ಕ ಫೌಂಡೇಷನ್ ಟ್ರಸ್ಟ್ ಹೋರಾಟ

IMG_20241119_113031_690.jpg
Published on

ಹುಬ್ಬಳ್ಳಿ: ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಿಸೈಕ್ಲಿಂಗ್ ಆಗಬೇಕು, ಪರದೇಶದಿಂದ ಪ್ಲಾಸ್ಟಿಕ್ ಆಮದು ನಿಲ್ಲಿಸಬೇಕು ಎಂಬುದು ಸೇರಿದಂತೆ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಕ್ಕ ಫೌಂಡೇಷನ್ ಟ್ರಸ್ಟ್ ಹೋರಾಟ ಹಮ್ಮಿಕೊಂಡಿದೆ ಎಂದು ಮುಖ್ಯಸ್ಥ ವೀರಪ್ಪ ಅರಕೇರಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ತ್ಯಾಜ್ಯ ಭಾರತದಲ್ಲಿ ಅತಿ ಹೆಚ್ಚು ಸಂಗ್ರಹಣೆಯಾಗುತ್ತಿದೆ. ಸರ್ಕಾರಗಳು ಪರಿಸರ ಕಾಳಜಿ ಮೆರೆಯಬೇಕು. ಹವಾಮಾನ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಮೂತ್ರಿಗಳು ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಗಲೀಜು ಮಾಡಲಾಗುತ್ತಿದೆ. ಅದರಲ್ಲೂ ಮಹಿಳೆಯರು ಶೌಚಗೃಹ ಇಲ್ಲದೇ ಅತಿ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಮಹಾನಗರ ಪಾಲಿಕೆಯು ಸರಿಯಾದ ವ್ಯವಸ್ಥೆ ಮಾಡದೇ ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.

ಈ ದಿಸೆಯಲ್ಲಿ ಜನದಟ್ಟಣೆ ಪ್ರದೇಶದಲ್ಲಿ ಶೌಚಗೃಹ ನಿರ್ಮಾಣ ಮಾಡಬೇಕು ಎಂದು ಹೋರಾಟ ಮಾಡಲಾಗುವುದು. ಡಿಸೆಂಬರ್ ನಲ್ಲಿ ನಡೆಯುವ ವಿಧಾನ ಮಂಡಳ ಅಧಿವೇಶನದಲ್ಲಿ ಪರಿಸರ ಕಾಳಜಿ ಬಗ್ಗೆ ಚರ್ಚೆ ನಡೆಯಬೇಕು. ಇದಕ್ಕಾಗಿ ಆಂದೋಲನ ರೂಪಿಸಲಾಗುವುದು. ಕೇಂದ್ರ ಸರ್ಕಾರ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗ್ರೀನ್ ಬಿಆರ್ಟಿಎಸ್ ಎಂದು ಹೇಳಿಕೊಂಡು ಬಂದಿರುವ ಬಿಆರ್ಟಿಎಸ್ ಕಂಪನಿಯು ಯಾವುದೇ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಶೌಚಗೃಹ ಕಟ್ಟಿಸಿಲ್ಲ. ಇದು ಗಂಭೀರ ವಿಷಯ. ಕೂಡಲೇ ಎಲ್ಲ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಟ್ರಸ್ಟ್‌ನ ಜಗದೀಶ ಉಣಕಲ್ಲ, ದೀಪಾ ಕಾದ್ರೊಳ್ಳಿ, ಸುನೀಲ ಬದ್ದಿ, ಮೃತ್ಯುಂಜಯ ಸಾಲಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net