ಸಾಲುಮರಗಳ ಕಡಿತಲೆಗೆ ಪರಿಸರ ಪ್ರಿಯರ ಆಕ್ರೋಶ

30hos4p tree
ಹೊಸನಗರದ ಚೌಡಮ್ಮ ರಸ್ತೆಯಲ್ಲಿ ಸಾಲುಮರಗಳ ಕಡಿತಲೆ ಮಾಡಿರುವುದು.
Published on

ಹೊಸನಗರ: ಪಟ್ಟಣದ ಚೌಡಮ್ಮ ರಸ್ತೆಯಲ್ಲಿ ಸಾಲುಮರಗಳ ಕಡಿತಲೆ ಮಾಡಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್ ತಂತಿಗೆ ತಾಗುತ್ತಿವೆ ಎಂಬ ಕಾರಣ ಹೇಳಿ ಪಪಂನಿಂದ ಮರಗಳ ಕಡಿತಲೆ ಮಾಡಲಾಗುತ್ತಿದೆ. ಈಗಾಗಲೇ 5ಕ್ಕೂ ಹೆಚ್ಚು ಮರಗಳನ್ನು ಬುಡಸಮೇತ ನೆಲಕ್ಕುರುಳಿಸಲಾಗಿದೆ. ಒಂದು ವೇಳೆ ವಿದ್ಯುತ್ ತಂತಿಗೆ ತಾಗುತ್ತಿದ್ದರೆ, ಅದರ ರೆಂಬೆ, ಕೊಂಬೆಗಳನ್ನು ಕಡಿದರೆ ಸಾಕು. ಆದರೆ ಇಡೀ ಮರಗಳ ಮಾರಣ ಹೋಮ ಮಾಡುವುದು ಎಷ್ಟು ಸರಿ ಎಂದು ಪರಿಸರ ಪ್ರಿಯರು ಪ್ರಶ್ನಿಸಿದ್ದಾರೆ. ಪರಿಸರ ಪ್ರಿಯರ ಆಕ್ರೋಶಕ್ಕೆ ಮಣಿದ ಪಪಂ ಉಳಿದ ಮರಗಳ ರೆಂಬೆ, ಕೊಂಬೆಗಳನ್ನು ಮಾತ್ರ ಕಡಿಯಲು ತೀರ್ಮಾನಿಸಿದೆ.
ಚೌಡಮ್ಮ ರಸ್ತೆಯಲ್ಲಿ ಯಾವುದೇ ಗಿಡ, ಮರಗಳಿಲ್ಲದ ಕಾರಣ 10 ವರ್ಷದ ಹಿಂದೆ ಜೆಸಿಐ ಮತ್ತು ನನ್ನೂರು ನನ್ನ ಜವಾಬ್ದಾರಿ ಸಂಘಟನೆ ಗಿಡಗಳನ್ನು ನೆಟ್ಟು ಪಾಲನೆ ಮಾಡಿದ್ದವು. ಪಪಂನಿಂದ ಮರಗಳನ್ನು ಬೆಳಸಿಲ್ಲ. ಆದರೆ ಯಾವುದೇ ಸಕಾರಣವಿಲ್ಲದೆ ಮರಗಳ ಕಡಿತಲೆ ಮಾಡಿರುವ ಪಪಂ ಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಸುರೇಶ್, ರಾಧಾಕೃಷ್ಣ ಪೂಜಾರಿ ಖಂಡಿಸಿದ್ದಾರೆ.
ಬಸ್ ನಿಲ್ದಾಣದ ಎದುರಲ್ಲಿ ಆಟೋ ನಿಲ್ದಾಣ ನಿರ್ಮಿಸಲಾಗಿತ್ತು. ಬಳಿಕ ಆ ಸ್ಥಳವನ್ನು ಹೂವಿನ ಅಂಗಡಿಗಳಿಗೆ ನೀಡಲಾಗಿದೆ. ಈಗ ಅವೈಜ್ಞಾನಿಕವಾಗಿ ಮತ್ತೊಂದು ಬದಿಯಲ್ಲಿ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಮರಗಳ ಕಡಿತಲೆ ಮಾಡಿರುವ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
ಜೆಸಿಐ ಮತ್ತು ನನ್ನೂರು ನನ್ನ ಜವಾಬ್ದಾರಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಪೂರ್ಣೇಶ್ ಮಲೇಬೈಲು, ಕೇಶವ್, ಶೈಲಾ ಕೇಶವ್, ನಿವೃತ್ತ ಸೈನಿಕ ರವಿ, ಜ್ಯೋತಿ ಪೂರ್ಣೇಶ್, ಸುಶೀಲಾ, ಸುಜಾತಾ, ಪ್ರದೀಪ ಕಾಡವಳ್ಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net