

ಬೆಂಗಳೂರು: ಮನುಷ್ಯನ ಮೀತಿ ಮೀರಿದ ದುರಾಸೆಯಿಂದ ಪರಿಸರ ಇಂದು ಹಾಳಾಗಿ, ಪ್ರಕೃತಿ ವಿನಾಶದತ್ತ ಸಾಗುತ್ತಿದೆ ಅದನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಬೇಕು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ ತಿಳಿಸಿದರು.
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದಲ್ಲಿ ನಬಿರೋಶನ ಪ್ರಕಾಶನ, ಬೋರಗಿ ವತಿಯಿಂದ ಆರಕ್ಷಕ ಮೌಲಾಲಿ ಆಲಗೂರ ಅವರ ‘‘ನಲುಗದಿರಲಿ ಪರಿಸರ’ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನೀಕರಣ ಮತ್ತು ನಗರೀಕರಣದ ಹೆಸರಿನಲ್ಲಿ ಮರಗಳನ್ನು ನೆಲಕ್ಕೂರುಳಿಸಿ ಪರಿಸರವನ್ನು ನಲುಗುವಂತೆ ಮಾಡುತ್ತಿದ್ದೇವೆ, ಪರಿಸರ ಕುರಿತು ಕಾಳಜಿ ವಹಿಸದಿದ್ದರೆ ಮುಂದೊಂದು ದಿನ ಪರಿಶುದ್ಧ ವಾತಾವರಣ ಸಿಗದೇ ನಾವು ನಲುಗಬೇಕಾಗುತ್ತದೆ ಎಂದರು.
ಡಿಸಿಪಿ ಎಸ್.ಸಿದ್ಧರಾಜು, ರಾಜ್ಯ ಗ್ರಂಥಾಲಯ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ನಾವು ಮಾಡುತ್ತಿರುವ ಪರಿಸರ ನಾಶವನ್ನು ತಡೆಯದಿದ್ದರೆ ನಮ್ಮ ಜೀವನದ ಕ್ರಮದ ಮೇಲು ದುಷ್ಪರಿಣಾಮ ಬೀರುತ್ತದೆ. ಹಸಿರು ನಮ್ಮ ಸಂಪತ್ತು ಅದನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಲ್ಲದೆ ಮೌಲಾಲಿ ರಚಿತ ನಲುಗದಿರಲಿ ಪರಿಸರ ಕೃತಿಯು ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸಲು ತುಂಬಾ ಸಹಕಾರಿಯಾಗಿದೆ ಎಂದರು.
ಪಿಎಸ್‌ಐ ಟಿಪ್ಪು ನಾಯಕವಾಡಿ ಕೃತಿ ಪರಿಚಯಿಸಿದರು. ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಭಾಷಣಗಾರ್ತಿ ಇಂದುಮತಿ ಸಾಲಿಮಠ, ಕಾಮಿಡಿ ಕಿಲಾಡಿಯ ಖ್ಯಾತಿಯ ಸದಾನಂದ ಕಾಳಿ ಮಾತನಾಡಿದರು.
ವೇದಿಕೆಯ ಮೇಲೆ ವೀರಲೋಕ ಪ್ರಕಾಶಕ ವೀರಪುತ್ರ ಶ್ರೀನಿವಾಸ, ಎಚ್.ವಿ ಮೀನಾ, ಇನ್‌ಸ್ಪೆಕ್ಟರ್ ಎಂ.ರಮೇಶ್, ಡಾ.ಸಮೀರ ಹಾದಿಮನಿ ಕೃತಿಯ ಕತೃ ಮೌಲಾಲಿ ಕೆ.ಆಲಗೂರ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಸಾಧಕರಿಗೆ ಉತ್ತಮ ಸೇವಾ ಪುರಸ್ಕಾರ:
ಇದೇ ವೇಳೆ ಡಿವೈಎಸ್ಪಿ ಡಾ.ವಿನೋದ ಕುಮಾರ್ ಮುಕ್ತೆದಾರ, ಇನ್‌ಸ್ಪೆಕ್ಟರಗಳಾದ ಸಲೀಮ್ ನದಾಫ್, ಎಲ್.ವೈ.ರಾಜೇಶ್, ಆರ್.ಟಿ.ಓ ಅರುಣ ಕಟ್ಟಿಮನಿ, ಸಮನ್ವಯ ಅಧಿಕಾರಿ ಸುರಯ್ಯ ಹಾದಿಮನಿ, ಉದ್ಯಮಿ ಅನಂತರಾವ್ ಕುಲಕರ್ಣಿ, ಇಂಜನಿಯರ್‌ಗಳಾದ ಸಂಗಮೇಶ, ನಬಿಲಾಲ್, ಸೇರಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಉತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.