

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಶಾಲೆ ಮತ್ತು ಕಚೇರಿಯನ್ನು ಸುಂದರವಾಗಿಟ್ಟುಕೊಳ್ಳಬೇಕು. ಪರಿಸರವು ನಮ್ಮ ಅನುಕೂಲದ ಅಮೂಲ್ಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿದೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ಹುಬ್ಬಳ್ಳಿ- ಧಾರವಾಡ ನಾಗರಿಕ ಪರಿಸರ ಸಮಿತಿ, ಮುನವಳ್ಳಿ ಫೌಂಡೇಷನ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜೆಎಸ್‌ಎಸ್ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಸ್ಪರ್ಧೆ- 2025, ಶಿಕ್ಷಕರ ಪೂರ್ವಭಾವಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಸೇವಿಸುವ ಗಾಳಿ, ಉಣ್ಣುವ ಅನ್ನ, ಹಣ್ಣು, ತರಕಾರಿ ರಾಸಾಯನಿಕ ಮಿಶ್ರಿತವಾಗಿದೆ. ಪ್ರತಿಯೊಬ್ಬರಿಗೂ ತಪ್ಪಿನ ತಿಳಿವಳಿಕೆ ಆಗಬೇಕಾಗಿದೆ. ಸÀರ್ಕಾರ ಮತ್ತು ಕಾನೂನಿನಿಂದ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಬಾಲ್ಯದಲ್ಲೇ ಪರಿಸರದ ಮಹತ್ವ ತಿಳಿಸಬೇಕಾಗಿದೆ ಎಂದರು.
ಜಿಲ್ಲಾ ಯೋಜನಾ ಉಪ ಸಮನ್ವಯಾಽಕಾರಿ ಎಸ್.ಎಂ. ಹುಡೇದಮನಿ ಮಾತನಾಡಿ, ಮಕ್ಕಳಿಗೆ ಪರಿಸರ, ನೀರು ಸಂರಕ್ಷಣೆಯ ವಿಧಾನಗಳ ತಿಳಿವಳಿಕೆ ನೀಡಬೇಕು. ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಆಗಬೇಕು ಎಂದರು.
ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಮಿತ್ರ ಶಾಲಾ ಯೋಜನೆಯ ಸಂಯೋಜಕ ಕೆ.ಎಚ್. ನಾಯಕ ಮಾತನಾಡಿದರು.
ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಲಗಿ, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಡಾ. ರೇಣುಕಾ ಅಮಲಝರಿ, ಇತರರಿದ್ದರು. ಡಾ. ವಿಲಾಸ ಕುಲಕರ್ಣಿ ಸ್ವಾಗತಿಸಿದರು. ಐ.ಎಲ್. ಪಾಟೀಲ ವಂದಿಸಿದರು.