ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನಕ್ಕೆ ಚಾಲನೆ

17adarshkdga1
Published on

ಮಡಿಕೇರಿ: ಸೆ.೧೮ ರಂದು ನಡೆಯಲಿರುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಮಾಲಿನ್ಯಕಾರಿ ಪಿ.ಓ.ಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ, ಮಣ್ಣಿನ ಗಣೇಶ ಮೂರ್ತಿ ಬಳಕೆ ಮಾಡುವ ಮೂಲಕ ಜಲಮಾಲಿನ್ಯ ತಡೆದು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಹೇಳಿದರು.


ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್‌ನ ಆಶ್ರಯದಲ್ಲಿ ನಮ್ಮ ನಡೆ ಹಸಿರೆಡೆಗೆ ಅಭಿಯಾನದಡಿ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.


ಗಣೇಶ ಚತುರ್ಥಿಯನ್ನು ಶಬ್ಧ, ವಾಯು ಹಾಗೂ ಜಲ ಮಾಲಿನ್ಯ ರಹಿತವಾಗಿ ಆಚರಿಸಲು ದೃಢ ಸಂಕಲ್ಪ ತೊಡಬೇಕು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಸರ್ಕಾರದೊಂದಿಗೆ ಎಲ್ಲಾ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಿ ಇಂತಹ ಪರಿಸರ ಪೂರಕ ಜಾಗೃತಿ ಆಂದೋಲನ ಮಾದರಿಯಾದುದು ಎಂದರು.


ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಕೊಡಗಿನಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಸಂಘಟಿಸುತ್ತಾ ಬರುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.


ಇಕೋ ಕ್ಲಬ್‌ನ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಮಾಲಿನ್ಯ ರಹಿತ ಹಾಗೂ ರಾಸಾಯನಿಕ ಮುಕ್ತ ಪರಿಸರ ಪೂರಕ ಮಣ್ಣಿನ ಗಣೇಶ ಮೂರ್ತಿಯನ್ನು ಮಾತ್ರ ಬಳಕೆ ಮಾಡುವ ಕುರಿತು ಶಾಲಾ-ಕಾಲೇಜು ಹಾಗೂ ನಾಗರಿಕರಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ೧೨ ವರ್ಷಗಳಿಂದ ನಿರಂತರವಾಗಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಹಾಗೂ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ, ಡಿಡಿಪಿಐ ಸೌಮ್ಯ ಪೊನ್ನಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಡಾ.ಎಂ.ಎನ್.ಪ್ರಕಾಶ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಪದಾಧಿಕಾರಿ ಎಂ.ಡೈಸಿ, ಸಂಸ್ಥೆಯ ಉಪ ಪ್ರಾಂಶುಪಾಲೆ ಕೆ.ವಿ.ಶಶಿಕಲಾ, ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಐ.ಜೆ.ಜೆನೆಟ್, ಶಿಕ್ಷಕಿಯರಾದ ಸೌಮ್ಯಲತಾ, ಐರಿನ್ ಉಷಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಮಕ್ಕಳು ಸ್ವತಃ ಮಣ್ಣಿನಿಂದ ಮತ್ತು ಅಕ್ಕಿಹಿಟ್ಟು ಹಾಗೂ ಗೋಧಿ ಹಿಟ್ಟಿನಿಂದ ತಯಾರಿಸಿ ಪ್ರದರ್ಶಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಪ್ರೇಕ್ಷಕರ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net