

ಚಿತ್ರದುರ್ಗ: ಭೂಮಿಗೆ ಆಸರೆ ಕೊಟ್ಟ ಕೈಗಳು, ಮಾನವ ಕುಲವನ್ನು ಹರಸುತ್ತಿದ್ದ ಹಸಿರು ಗಿಡಗಳು, ಜಾಗತಿಕ ತಾಪಮಾನದ ಭೀಕರತೆ,‘ಗೋ ಗ್ರೀನ್ ಸೇವ್ ಗ್ರೀನ್’, ‘ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಉಳಿಸಿ’ ಎಂಬ ಘೋಷಣೆಗಳು…
ವಿಶ್ವ ಪರಿಸರ ದಿನದಂಗವಾಗಿ ತಮಗೆ ನೀಡಿದ ಕ್ಯಾನ್ವಾಸ್‌ನಲ್ಲಿ ಪುಟ್ಟ ಪುಟ್ಟ ಕೈಗಳು ತಮ್ಮ ಪರಿಸರ ಪ್ರೇಮವನ್ನು ಬಿಚ್ಚಿಟ್ಟ ಪರಿಯಿದು.
ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿ ವತಿಯಿಂದ ಎಸ್‌ಆರ್‌ಎಸ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ’ಯಲ್ಲಿ 570 ಕ್ಕೂ ಹೆಚ್ಚು ಚಿಣ್ಣರು ತಮ್ಮ ಕೈಚಳಕ ತೋರಿದರು.
ಕೋಟೆನಗರಿಯ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಸಿರಿನ ಬಗೆಗೆ ತೋರಿದ ಕಾಳಜಿ ಅನನ್ಯ. ಅದಕ್ಕೆಂದೇ ಸಸಿ ನೆಡುವಿಕೆ, ತೆಂಗಿನ ತೋಟ, ಸಮುದ್ರ ತೀರದಲ್ಲಿ ಸುಂದರ ಪರಿಸರ, ಮನೆ-ಬೆಟ್ಟ-ಗುಡ್ಡಗಳ ಮುಂದೆ ಹಚ್ಚಹಸಿರಿನ ವಾತಾವರಣ, ತೋಟದ ಮನೆ, ಪ್ರಕೃತಿ ಮಾತೆ, ತ್ರಿಡಿ ಮಾದರಿಯ ಭೂಮಂಡಲದ ಚಿತ್ರ, ಸಸ್ಯ ಸಂಕುಲ ಎದುರಿಸುತ್ತಿರುವ ಹಲವು ಸಮಸ್ಯೆ, ನದಿ-ಕೆರೆ-ಕಟ್ಟೆಗಳಿಗೆ ಕಲುಷಿತ ನೀರು ಹರಿಬಿಡುವುದರಿಂದ ಆಗುವ ಅನಾಹುತ… ಇವೆಲ್ಲವೂ ಮಕ್ಕಳ ಕಲ್ಪನೆಯಲ್ಲಿ ಮೂಡಿ ಬಂದವು.
ಶಿಕ್ಷಕರು-ಪಾಲಕರು ತಮ್ಮ ಮಕ್ಕಳನ್ನು ಕರೆತಂದು ಅವರಲ್ಲಿ ಹುದುಗಿರುವ ಪರಿಸರ ಪ್ರಜ್ಞೆಯ ಅನಾವರಣಕ್ಕೆ ನೆರವಾದರು.
ಹಬ್ಬದ ಸಂಭ್ರಮ: ಮಕ್ಕಳ ಕೂಟ ಇರುವೆಡೆ ಆಟೋಟ ಸದ್ದು ಮಾಡುವುದು ಸಾಮಾನ್ಯ. ಆದರೆ, ಸೋಮವಾರ ಶಾಲೆಯ ಸಭಾಂಗಣ ಚಿತ್ರಕಲಾ ಶಾಲೆಯಾಗಿ ಬದಲಾದಂತೆ ಭಾಸವಾಯಿತು. ಬೆಳಗ್ಗೆ 9.30 ರಿಂದಲೇ ಮಕ್ಕಳು ಹೆಸರು ನೋಂದಾಯಿಸಲು ಸಾಲುಗಟ್ಟಿ ನಿಂತಿದ್ದರು. ಶಾಲಾವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸಂದೇಶ ರವಾನಿಸಿದ ಮಕ್ಕಳು: ಮಕ್ಕಳು ತಾವು ಬಿಡಿಸಿದ ಚಿತ್ರಗಳ ಕೆಳಗೆ ಅಡಿಬರಹಗಳಲ್ಲಿ ‘ಗೋ ಗ್ರೀನ್ ಸೇವ್ ಗ್ರೀನ್’, ‘ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಉಳಿಸಿ’, ‘ಮನೆಗೊಂದು ಮರ-ಊರಿಗೊಂದು ವನ’ ಇತ್ಯಾದಿ ಘೋಷವಾಕ್ಯದ ಮೂಲಕ ತಮ್ಮಲ್ಲಿರುವ ಪರಿಸರ ಕಾಳಜಿ ಕುರಿತ ಸಂದೇಶ ರವಾನಿಸಿದರು. ಈ ಬಾರಿಯ ಘೋಷವಾಕ್ಯವಾದ ‘ಪ್ಲಾಸ್ಟಿಕ್ ಮಾಲಿನ್ಯ ಸೋಲಿಸಿ’ ಎಂಬ ಅಡಿಬರಹವೂ ಕಂಡುಬಂದಿತು.
ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆ: ಜೂನಿಯರ್ (5-7ನೇ ತರಗತಿ), ಸೀನಿಯರ್ (8-10ನೇ ತರಗತಿ) ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ‘ನನ್ನ ಕನಸಿನ ಭೂಮಿ’, ‘ಪಟ್ಟಣ ಮತ್ತು ಪಾರ್ಕ್’, ‘ಪರಿಸರ’ ವಿಷಯಗಳ ಬಗ್ಗೆ ಚಿತ್ರ ಬಿಡಿಸಲು ಅವಕಾಶವಿತ್ತು.
ಭೂಮಿ, ಪರಿಸರವನ್ನೇ ಸ್ವರ್ಗವನ್ನಾಗಿಸಿ: ಸ್ವರ್ಗದಂತಿರುವ ಭೂಮಿ, ಪರಿಸರವನ್ನು ನಾವು ನರಕ ಮಾಡುತ್ತಿದ್ದು, ಕಷ್ಟ, ತೊಂದರೆಗಳನ್ನು ಆಹ್ವಾನಿಸುತ್ತಿದ್ದೇವೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಎಚ್ಚರಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯವಾಣಿ ಪತ್ರಿಕೆ, ದಿಗ್ವಿಜಯ ವಾಹಿನಿ, ಅರಣ್ಯ ಇಲಾಖೆ, ಎಸ್‌ಆರ್‌ಎಸ್ ಶಾಲೆಯಿಂದ ಸೋಮವಾರ ಆಯೋಜಿಸಿದ್ದ ‘ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ’ ಉದ್ಘಾಟಿಸಿ ಮಾತನಾಡಿದರು.
ಜೀವಿಸುವ ಪರಿಸರವನ್ನೇ ನರಕ ಮಾಡಿಕೊಂಡು, ಸ್ವರ್ಗದಲ್ಲಾದರೂ ಸುಖವಾಗಿಡು ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇವೆ. ಅದರ ಬದಲು ಇಲ್ಲೇ ಸ್ವರ್ಗ ಸೃಷ್ಟಿಸಿಕೊಳ್ಳಬಹುದು. ಆ ಜವಾಬ್ದಾರಿ ಎಲ್ಲರ ಮೇಲಿದೆ. ಸಕಲ ಜೀವರಾಶಿಗಳಿಗೂ ಆಧಾರವಾಗಿರುವ ನಮ್ಮ ಭೂಮಿಯ ಕುರಿತು ಗೌರವ, ಗರ್ವ, ಹೆಮ್ಮೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಚಂದವಾದ ವಾತಾವರಣದಲ್ಲೇ ನಾವೆಲ್ಲ ಇದ್ದೇವೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವಾಗಬೇಕು. ಅತಿಯಾದ ಆಸೆಗೆ ಬಿದ್ದು, ಪರಿಸರಕ್ಕೆ ಧಕ್ಕೆ ಉಂಟು ಮಾಡದೆ ಅಗತ್ಯವಿರುವಷ್ಟು ಮಾತ್ರ ಬಳಸಬೇಕು ಎಂದು ತಿಳಿಸಿದರು.
ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ರಸ್ತೆಗಳಲ್ಲಿ ಉಗುಳುವುದು, ಎಲ್ಲೆಂದರಲ್ಲಿ ಅನುಪಯುಕ್ತ ವಸ್ತು ಬಿಸಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ನಗರಸಭೆ, ಗ್ರಾಪಂನಿಂದ ಕಸದ ಬುಟ್ಟಿಗಳನ್ನು ಇಡಲಾಗಿದ್ದರೂ ಹಲವರು ಬಳಸುತ್ತಿಲ್ಲ ಎಂದು ಬೇಸರಿಸಿದರು.
ಅರಿವೆಂಬುದು ಸ್ವಯಂ ಪ್ರೇರಣೆಯಿಂದ ಬರಬೇಕು. ಮಕ್ಕಳಿಗೆ ಕಲಿಕೆ ಆರಂಭವಾಗುವುದೇ ಮನೆ ಮತ್ತು ಶಾಲೆಯಲ್ಲಿ. ಆದ ಕಾರಣ ಎರಡೂ ಕಡೆ ಪರಿಸರ ರಕ್ಷಣೆಗೆ ಹೆಚ್ಚು ಒತ್ತು ನೀಡಿ ಎಂದು ಸಲಹೆ ನೀಡಿದರು.
ಅರಿವು ಮೂಡಿಸಿದರೂ ಪರಿಸರ ಮೇಲಿನ ಆಕ್ರಮಣ ನಿಂತಿಲ್ಲ. ಮುಂದಿನ ದಿನಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾಲ್ಡೀವ್ಸ್, ಸಿಂಗಾಪುರ್, ದುಬೈ ಪ್ರವಾಸ ಕರೆದೊಯ್ದು ಅಲ್ಲಿಯ ಪರಿಸರ ಪರಿಚಯಿಸಲಾಗುವುದು ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್ ಸ್ಪರ್ಧೆಯ ಉದ್ದೇಶ ವಿವರಿಸಿದರು.
ಎಸಿಎಫ್ ಸುರೇಶ್, ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಪ್ರಾಂಶುಪಾಲ ಪ್ರಭಾಕರ್, ಕ್ರಿಯೇಟಿವ್ ವೀರೇಶ್, ಮುಖ್ಯ ಉಪಸಂಪಾದಕ ಹರ್ಷ ಪುರೋಹಿತ, ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್.ಕುಮಾರಸ್ವಾಮಿ, ವರದಿಗಾರ ಕೆ.ಎಸ್.ಪ್ರಣವಕುಮಾರ್, ದಿಗ್ವಿಜಯ ವರದಿಗಾರ ವೀರೇಶ್, ಪ್ರಸಾರಾಂಗ ವಿಭಾಗದ ಶುಭಾಕರ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್ ಇತರರಿದ್ದರು.