ಪರಿಸರಸ್ನೇಹಿಯಾಗಿ ಬದುಕಿದರಷ್ಟೇ ಉಳಿವು: ಅಲಯನ್ಸ್ ಕ್ಲಬ್ಸ್ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಅಭಿಮತ

Environment Day Mandya
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಾದರೂ ಮನುಷ್ಯ ಪರಿಸರ ಸ್ನೇಹಿಯಾಗಿ ಬದುಕುವುದು ಅತ್ಯಾವಶ್ಯಕ ಎಂದು ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ನ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಂಚಿನಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷಿನಲ್ ಮತ್ತು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನನ್ನು ಹೊರತುಪಡಿಸಿ ಉಳಿದ ಎಲ್ಲ ಜೀವಸಂಕುಲಗಳು ಪರಿಸರಸ್ನೇಹಿಯಾಗಿ ಬದುಕುತ್ತವೆ. ಪ್ರಮುಖವಾಗಿ ಪರಿಸರಕ್ಕೆ ಯಾವುದೇ ಧಕ್ಕೆ ಉಂಟು ಮಾಡುವುದಿಲ್ಲ. ಆದರೆ ಮನುಷ್ಯ ಮಾತ್ರ ಪ್ರಕೃತಿಯಿಂದ ಎಲ್ಲವನ್ನೂ ಪಡೆದು, ಪರಿಸರವನ್ನು ನಾಶ ಮಾಡಿ ಬದುಕುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಬೇಸಿಗೆ ಕಾಲದಲ್ಲಿ ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಮಂಡ್ಯದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಪರೀತ ಸೆಕೆ, ಬಿಸಿಗಾಳಿಯ ಅನುಭವ ಹೆಚ್ಚಾಗುತ್ತಿದೆ. ಮನೆಯಿಂದ ಬೀದಿಗೆ ಬರಲಾರದಷ್ಟು ಬಿಸಿ ವಾತಾವರಣವನ್ನು ಕಾಣುತ್ತಿದ್ದೇವೆ. ಇನ್ನಾದರೂ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಿರು ಅರಣ್ಯ ನಿರ್ಮಾಣ ಅಗತ್ಯವಿದೆ. ಶಾಲಾ ಕಾಲೇಜಿಗಳಿಗೆ ನೀಡುವ ಪರಿಸರ ಶಿಕ್ಷಣ ಮತ್ತು ಉತ್ತೇಜನವನ್ನು ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸುವ ಆಲೋಚನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಬೇಕು. ಉತ್ತಮ ಕಿರು ಅರಣ್ಯ ನಿರ್ಮಾಣ ಮಾಡಿದ ಪಂಚಾಯಿತಿಗೆ ಬಹುಮಾನ ನೀಡುವ ಮೂಲಕ ಉತ್ತೇಜನ ನೀಡಬಹುದು ಎಂದು ಸಲಹೆ ನೀಡಿದರು.

ಖಾಲಿ ಬಿದ್ದಿರುವ ಜಾಗಗಳಲ್ಲಿ ರಸ್ತೆಯಂಚಿನಲ್ಲಿ ಜನೋಪಯೋಗಿ ಮರಗಳಾದ ಅರಳಿಮರ, ಆಲದಮರ, ಬಸರಿಮರ, ನೇರಳೆ ಮರ, ಔಷಧ ಸಸ್ಯಗಳನ್ನು ನೆಡುವುದು ಅಗತ್ಯವಿದೆ. ಇಂಗಾಲದಂತಹ ಅನೇಕ ವಿಷಾನಿಲಗಳು ಹೆಚ್ಚಾಗಿ ವಾತಾವರಣ ಕಲುಷಿತಗೊಳ್ಳುತ್ತಿದೆ. ಜತೆಗೆ ಮನುಷ್ಯನ ಆರೋಗ್ಯದ ಮೇಲೆ ಅನೇಕ ಪ್ರಭಾವ ಬೀರುವುದನ್ನು ತಡೆಯಲು ಅರಣ್ಯೀಕರಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ಮುಂದಿನ ಪೀಳಿಗೆಯ ರಕ್ಷಣೆಗಾಗಿ ಇಂದು ನಾವು ಕೊಡುಗೆ ನೀಡುವುದು ಮರ ಗಿಡಗಳಾಗಿವೆ. ಇವುಗಳನ್ನು ನೆಟ್ಟು ಪೋಷಿಸೋಣ, ಪ್ರಕೃತಿಯಿಂದ ಎಲ್ಲವನ್ನು ಪಡೆದು, ಪ್ರಕೃತಿಗೆ ನಾವು ಮರಗಳನ್ನು ನೀಡೋಣ. ಮನುಷ್ಯ ಪರಿಸರಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ಮಾರಕವಾದರೆ ವಿನಾಶದಂಚಿಗೆ ಮತ್ತಷ್ಟು ದೂಕುತ್ತದೆ. ಎಚ್ಚೆತ್ತುಕೊಂಡು ಪರಿಸರ ಸ್ನೇಹಿ ಬದುಕನ್ನು ನಡೆಸುವುದು ಸೂಕ್ತ ಎಂದು ತಿಳಿಸಿದರು.

ಭಾರತದಲ್ಲಿರುವ ಸುಮಾರು 140 ಕೋಟಿ ಜನರಲ್ಲಿ 100 ಕೋಟಿ ಜನ ಒಂದೊಂದು ಗಿಡ ನೆಟ್ಟರೂ ಬೇಕಾದಷ್ಟು ಮರವಾಗುತ್ತವೆ. ಇದು ನಿರಂತರವಾಗಿ ಸಾಗಬೇಕಿದೆ. ಇರುವುದೊಂದೇ ಭೂಮಿ, ಜೀವನಕ್ಕಾಗಿ ಭೂಮಿಯನ್ನು ರಕ್ಷಿಸಿಸೋಣ, ಅರಣ್ಯವನ್ನು ಬೆಳೆಸೋಣ ಎಂದರು.

ಪಿಇಎಸ್ ಕಾಲೇಜಿನ ಪರಿಸರ ವಿಜ್ಞಾನ ಮುಖ್ಯಸ್ಥೆ ಪ್ರೊ.ಎಚ್.ಎಸ್.ಭವ್ಯಾ, ಮಾಂಡವ್ಯ ಅಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಶಿವಕುಮಾರ್, ಪರಿಸರ ಪ್ರೇಮಿ ಪುರುಷೋತ್ತಮ್, ಲೋಕೇಶ್, ಚಂದ್ರಶೇಖರ್, ರಾಧಾಕೃಷ್ಣ, ಎಲ್‌ಐಸಿ ಮಹೇಶ್, ರಮೇಶ್ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ರಸ್ತೆಯಂಚಿನದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಜತೆಗೆ ಆ ಗಿಡಗಳನ್ನು ಮರ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net