ನಗರಪಾಲಿಕೆ ವಲಯ ಕಚೇರಿಯಿಂದ ಪರಿಸರ ದಿನ ಆಚರಣೆ

01
Published on

ಮೈಸೂರು: ನಗರಪಾಲಿಕೆ ಜಯನಗರ ವಲಯ ಎರಡರಲ್ಲಿ ಶುಕ್ರವಾರ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ವಲಯ-2ರ ಆಯುಕ್ತ ನಾಗರಾಜು ಅವರು ಗಿಡ ನೆಟ್ಟು ಬಳಿಕ ಮಾತನಾಡಿ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮನುಷ್ಯನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗಿದೆ. ಅದನ್ನು ಉಪಯೋಗಿಸಿಕೊಂಡು ಮನುಷ್ಯ ಆಸೆಗಳನ್ನು ಪೂರೈಸಿಕೊಳ್ಳಬೇಕೇ ಹೊರತು ದುರಾಸೆಗಳನ್ನಲ್ಲ ಎಂದು ಕಿವಿಮಾತು ಹೇಳಿದರು.
ಹಣದ ಬೆನ್ನು ಹತ್ತಿರುವ ಮಾನವ ಪ್ರಕೃತಿಯನ್ನು ನಾಶ ಮಾಡುತ್ತಾ, ಅಟ್ಟಹಾಸ ಮೆರೆಯುತ್ತಿದ್ದಾನೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮುಂದಿನ ದಿನಗಳಲ್ಲಿ ಯುವಕರು ಪರಿಸರ ಸಂರಕ್ಷಣೆ ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು ತಿಳಿಸಿದರು.
ನಗರಪಾಲಿಕೆಯ ಅಭಿವೃದ್ಧಿ ಅಧಿಕಾರಿ ಚೇತನ್‌ಬಾಬು ಮಾತನಾಡಿ, ಈ ಭೂಮಿ ನಾವು ನಮ್ಮ ಹಿರಿಯರಿಂದ ಪಡೆದ ಬಳುವಳಿಯಲ್ಲ. ನಮ್ಮ ಮಕ್ಕಳಿಗೆ ಸಲ್ಲಿಸಬೇಕಾದ ಋಣ. ಆದ್ದರಿಂದ ಮಕ್ಕಳಿಗೆ ಆಸ್ತಿ, ಹಣ, ಅಂತಸ್ತು ಮಾಡುವುದು ಮುಖ್ಯವಲ್ಲ. ಪರಿಸರವನ್ನು ರಕ್ಷಣೆ ಮಾಡಿ, ಶುದ್ಧವಾದ ಗಾಳಿ, ನೀರು, ಬೆಳಕು, ಸ್ವಚ್ಛತೆ ಕಾಪಾಡುವುದೇ ಮುಂದಿನ ತಲೆಮಾರಿಗೆ ದೊಡ್ಡ ಕೊಡುಗೆ. ಪರಿಸರ ದಿನಾಚರಣೆ ಎಂಬುದು ಆ ದಿನಕ್ಕೆ ಸೀಮಿತವಾಗದೆ ನಿತ್ಯವೂ ಗಿಡ, ಸಸಿಗಳನ್ನು ನೆಟ್ಟು, ಕಾಪಾಡಬೇಕು ಎಂದು ತಿಳಿಸಿದರು.
ಪರಿಸರ ಇಂಜಿನಿಯರ್ ಮಹದೇವಮ್ಮ, ವರ್ಕ್ ಇನ್ಸ್‌ಪೆಕ್ಟರ್ ಶಿವಸ್ವಾಮಿ, ಆರೋಗ್ಯ ಪರೀಕ್ಷಕರಾದ ಅಶ್ವತ್, ಕೃಷಿ ಇಲಾಖೆಯ ಕುಮಾರ್, ಪುನೀತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net