ಪ್ರಕೃತಿ ವಿಕೋಪಕ್ಕೆ ಮಾನವ ಕಾರಣ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಬೇಸರ

Environment day celebration at fire department office Mandya
Published on

ಮಂಡ್ಯ: ಪ್ರಕೃತಿಯನ್ನು ಮಾನವ ವಿನಾಶದ ಅಂಚಿಗೆ ತಳ್ಳಿದ್ದಾನೆ. ಪರಿಸರದ ಮೇಲೆ ಅತಿಯಾದ ಆಕ್ರಮಣದಿಂದ ಪ್ರಕೃತಿ ವಿಕೋಪ ಉಂಟಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಅಗ್ನಿಶಾಮಕ ದಳದ ಕಚೇರಿ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ, ನಗರಸಭೆ, ರೋಟರಿ ಮಂಡ್ಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಸಮಯ ದೂರವಿಲ್ಲ. ಹಲವು ವರ್ಷಗಳಲ್ಲಿ ನೀರುಗಲ್ಲುಗಳು ಕರಗಿ ಕಡಲ ತೀರಗಳು ಮುಳುಗುತ್ತವೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಅದರಂತೆ ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಹಾಗಾಗಿ ಪ್ರಕೃತಿಯನ್ನು ರಕ್ಷಣೆ ಮಾಡುವುದು ಮುಖ್ಯವಾಗಬೇಕು. ಆ ಮೂಲಕ ಒಂದು ಸಸಿ ನೆಟ್ಟು ಪೋಷಣೆ ಮಾಡುವ ಮನೋಭಾವ ಹೆಚ್ಚಾಗಲಿ. ವಿಶ್ವ ಪರಿಸರ ದಿನದಂದು ಮಾತ್ರ ಪರಿಸರ ಸಂರಕ್ಷಣೆ ಮಾಡದೆ ಪ್ರತಿದಿನವೂ ಕೂಡ ಪರಿಸರ ಸಂರಕ್ಷಿಸುವ ಕೆಲಸ ಆಗಬೇಕು ನಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ನೆಟ್ಟಿ ಪ್ರಕೃತಿಯನ್ನು ಉಳಿಸೋಣ ಎಂದು ಸಲಹೆ ನೀಡಿದರು.

ನ್ಯಾಯಾಧೀಶರಾದ ಮಂಜುಳಾ ಇಟ್ಟಿ, ದಿಲೀಪ್‌ಕುಮಾರ್, ಬಿ.ಸಂದೀಪ್ ಸಾಲಿಯಾನ, ಲಕ್ಷ್ಮೀ, ಪೂಜಾಶೆಟ್ಟಿ, ಶಂಕರ ವಜ್ರೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ, ಕಾರ್ಯದರ್ಶಿ ರಾಜೇಶ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಅಗ್ನಿಶಾಮಕ ದಳದ ಕಚೇರಿಯ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ನೀರೆರೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net