

ಮೈಸೂರು: ಇಂದಿನ ಮಕ್ಕಳು ತಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಪರಿಸರವನ್ನು ಜತನದಿಂದ ಕಾಪಾಡಿಕೊಳ್ಳಬೇಕಿದೆ. ಭವಿಷ್ಯದ ಉಸಿರು ಪರಿಸರದ ಅಸ್ತಿತ್ವದಲ್ಲಿದೆ ಎಂಬ ವಾಸ್ತವ ಪರಿಸ್ಥಿತಿಯನ್ನು ಮಕ್ಕಳಿಗೆ ಮನನ ಮಾಡಿಕೊಡಬೇಕಾಗಿರುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದು ಪರಿಸರ ತಜ್ಞೆ ರೇಖಾ ರೋಹಿತ್ ಕರೆ ನೀಡಿದರು.
ಆರ್.ಟಿ. ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಇಂದು ಪರಿಸರಕ್ಕೆ ಮನುಷ್ಯರೇ ಕಂಟಕಪ್ರಾಯರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಾವು ಬಳಸುವ ಪರಿಸರ ಕೆಡಿಸುವ ವಸ್ತುಗಳು ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದು ಇದು ಪರಿಸರಕ್ಕೆ ಮಾರಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನೀರಿನ ಮೂಲವನ್ನು ಉಳಿಸುವುದು, ಕೆರೆ-ಕಟ್ಟೆ ಹಾಗೂ ನದಿಗಳ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು ನಗರೀಕರಣದ ವಿಸ್ತಾರದಲ್ಲಿ ಹಸಿರೀಕರಣವನ್ನು ನಾಶಮಾಡುತ್ತಿರುವ ಪರಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇಂದು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಜಾಗೃತಿ ಮೂಡಿಸುವುದು ಪಠ್ಯ ಕ್ರಮದ ಒಂದು ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರತಿ ಮಗುವೂ ಗಿಡಮರಗಳನ್ನು ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ವಿದ್ಯಾ ಸಂಸ್ಥೆಯು ಪ್ರತಿ ಮಗುವಿನ ಬೆಳವಣಿಗೆಯೊಂದಿಗೆ ಸಸಿಯೊಂದನ್ನು ಆ ಮಗುವೇ ಕಾಳಜಿವಹಿಸಿ ಬೆಳೆಸುವಂತೆ ಪ್ರೇರೇಪಿಸುತ್ತಿರುವ ಪರಿ ಸಂಸ್ಥೆಯ ಪರಿಸರ ಕಾಳಜಿಯ ದ್ಯೋತಕವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ನಂತರ ಶಾಲೆಯ ಮಕ್ಕಳು ಆರ್. ಟಿ. ನಗರ ಬಡಾವಣೆಯಲ್ಲಿ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಿ, ಪರಿಸರ ಪರ ಘೋಷಣೆಯ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಎನ್. ಮಹೇಂದ್ರ, ಉಪಪ್ರಾಂಶುಪಾಲರಾದ ಶಾಲಿನಿ ಮಾಜೋ, ಶೀನಾ ಗುರ್ನಾನಿ, ಪ್ರೀತಿ ಕಮಲ್ ಹಾಗೂ ಇತರರು ಇದ್ದರು.